ಮೈಸೂರು

ಜಾತಿ ತಾರತಮ್ಯ ವಿರೋಧಿಸಿ ದಲಿತ ಸಂಘಟನೆಗಳಿಂದ ಸಮಾವೇಶ

ಮೈಸೂರು,ಜು.14 : ದಲಿತ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅಸ್ಪೃಶ್ಯತೆ ಜಾತಿ ತಾರತಮ್ಯ ವಿರೋಧಿಸಿ ಆಗಸ್ಟ್ ನಲ್ಲಿ ಸಮಾವೇಶ ನಡೆಸುವುದಾಗಿ ದಲಿತ ಹಕ್ಕುಗಳ ಸಮಿತಿ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ತಿಳಿಸಿದರು.

ನಂಜನಗೂಡು ತಾಲ್ಲೂಕು ನವಿಲೂರಿನಲ್ಲಿ ಜಾತಿ ತಾರತಮ್ಯ, ದಲಿತರ ಮೇಲೆ ದೌರ್ಜನ್ಯ ನಡೆದರು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರದ ಈ ನಡೆಯನ್ನು ಖಂಡಿಸಿ ನಂಜನಗೂಡಿನಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ಶುಕ್ರವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಂತಿ ಸಭೆ ಹೆಸರಿನಲ್ಲಿ ಸಂಸದ ಆರ್.ಧ್ರುವನಾರಾಯಣ, ಕೇಶವಮೂರ್ತಿ ಮುಚ್ಚಳಿಕೆ ಬರೆಸಿಕೊಂಡು ರಾಜಿ ಮಾಡುವ ರೀತಿ ದಲಿತರನ್ನು ವಂಚಿಸಿ ಓಟಿನ ರಾಜಕೀಯ ಮಾಡುತ್ತಿದ್ದಾರೆ, ಇದು ತಪ್ಪಿತಸ್ಥರಿಗೆ ಶಿಕ್ಷೆ ಮಾಡುವ ಬದಲು ಜಾತಿ ತಾರತಮ್ಯಕ್ಕೆ ಕುಮ್ಮಕ್ಕು ನೀಡಿದಂತಾಗಿದೆ ಎಂದು ಟೀಕಿಸಿದರು.

ಚಾಮರಾಜ ನಗರದಲ್ಲಿ ದಲಿತ ಕೂಲಿ ಕಾರ್ಮಿಕರ ಜೋಡಿ ಕೊಲೆ, ಸಂತೇಮಾರನಹಳ್ಳಿ ಜಾತ್ರೆಯಲ್ಲಿ ಸಾಮಾಜಿಕ ಬಹಿಷ್ಕಾರ, ಗುಂಡ್ಲುಪೇಟೆಯಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದರು ಆರೋಪಿಗಳನ್ನು ಗುರುತಿಸಿ ಬಂಧಿಸುವಲ್ಲಿ  ಸರ್ಕಾರ ವಿಫಲವಾಗಿದೆ. ಈಗಲಾದರು ಪ್ರಕರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಈಗಲೂ ದೇವಸ್ಥಾನ ಪ್ರವೇಶ ನಿಷೇಧ, ಬಿಸಿಯೂಟ ತಯಾರಿಕೆಯಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ ಇವೆಲ್ಲದರ ಬಗ್ಗೆ ಜನಜಾಗೃತಿ ಮೂಡಿಸಿ ಸರ್ಕಾರದ ಗಮನ ಸೆಳೆಯಲು ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸಮಿತಿ ಸದಸ್ಯ ಶಕುಂತಲಾ, ಸಿಐಟಿಯು ಮುಖಂಡ ಹೆಚ್.ಎಸ್.ಜಗದೀಶ್, ಸತ್ಯರಾಜ್, ಆರ್.ಕೃಷ್ಣ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: