
ದೇಶಪ್ರಮುಖ ಸುದ್ದಿವಿದೇಶ
ಚೀನಾ ಗಡಿ, ಕಾಶ್ಮೀರ ಪರಿಸ್ಥಿತಿ ಕುರಿತು ಪ್ರಮುಖ ರಾಜಕೀಯ ಪಕ್ಷಗಳಿಗೆ ಕೇಂದ್ರ ಸರ್ಕಾರ ವಿವರಣೆ
ನವದೆಹಲಿ, ಜುಲೈ 15: ಭಾರತ-ಭೂತಾನ್-ಚೀನಾ ಗಡಿ ಸಂಧಿಸುವ ಡೋಕ್ಲಾಮ್ ಪ್ರವೇಶದ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವೆ ಉಂಟಾಗಿರುವ ಬಿಕ್ಕಟ್ಚಿನ ಕುರಿತಂತೆ ವಿರೋಧ ಪಕ್ಷ ಮತ್ತು ಎನ್ಡಿಎ ಮಿತ್ರ ಪಕ್ಷಗಳಿಗೆ ಕೇಂದ್ರ ಸರ್ಕಾರ ಶುಕ್ರವಾರ ವಿವರಣೆ ನೀಡಿದೆ.
ಚೀನಾ ಜೊತೆಗಿನ ಗಡಿ ಸಂಘರ್ಷ ಹಾಗೂ ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಕ್ಷಣಾ ಸಚಿವ ಅರುಣ್ ಜೇಟ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರೂ ಸೇರಿದಂತೆ ಇನ್ನಿತರ ಅನೇಕ ಉನ್ನತಾಧಿಕಾರಿಗಳು ವಿರೋಧ ಪಕ್ಷಗಳಿಗೆ ವಿವರಣೆ ನೀಡಿದರು. ಸಭೆಯಲ್ಲಿ ಬಿಜೆಪಿ ಕಾಂಗ್ರೆಸ್ ಸೇರಿದಂತೆ ಒಟ್ಟು 14 ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ದೇಶದ ಭದ್ರತೆಗೆ ಒದಗಿರುವ ಆತಂಕದ ಕುರಿತು ಆತಂಕ ನಿವಾಸಿರುವ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರಿಗೆ ಈ ಮಾಹಿತಿ ನೀಡಲಾಯಿತು.
“ದೇಶದ ಭದ್ರತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯಿಲ್ಲ. ಆದರೆ ಸೇನಾ ಸಂಘರ್ಷದ ಮಾರ್ಗಕ್ಕಿಂದ ಮೊದಲು ರಾಜತಾಂತ್ರಿಕ ನಡೆಗಳ ಮೂಲಕ ವಿವಾದ ಬಗೆಹರಿಸಲು ಪ್ರಯತ್ನಿಸಬೇಕು” ಎಂಬುದು ಬಹುತೇಕ ನಾಯಕರ ಅಭಿಪ್ರಾಯವಾಗಿತ್ತು.
ಆದರೆ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರೇನ್ ಅವರು ಕೇಂದ್ರ ಸರ್ಕಾರ ಯಾವುದೇ ತಯಾರಿ ಮಾಡಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯ ನಂತರ ಮಾತನಾಡಿದ ಅವರು, ಸಭೆಯಲ್ಲಿ ನಮ್ಮ ಪಕ್ಷ ಹಲವು ಗಂಭೀರ ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರವಿಲ್ಲ. ಮುಂದೊಗಬಹುದಾದ ಅಪಾಯ ಎದುರಿಸಲು ಎದುರಿಸಲು ಸರ್ಕಾರ ಸಿದ್ಧವಿದೆಯೇ ಎಂಬ ಪ್ರಶ್ನೆಗೆ ಸರ್ಕಾರ ಸಮರ್ಪಕವಾಗಿ ಉತ್ತರಿಸಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಸ್ತುತ ಚೀನಾ ಜೊತೆಗೆ ಸಂಘರ್ಷ ಉಂಟಾಗಿರುವ ಡೋಕ್ಲಾಮ್ ಪ್ರದೇಶ ಪಶ್ಚಿಮ ಬಂಗಾಳ ರಾಜ್ಯಕ್ಕೆ ಸಮೀಪವಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ಸಂಸತ್ತಿನಲ್ಲಿ ಅಧಿವೇಶನ ಸೋಮವಾರ ಆರಂಭಗೊಳ್ಳುತ್ತಿದ್ದು, ಅಧಿವೇಶನಕ್ಕೆ ಮುನ್ನ ಚೀನಾ ಜೊತೆಗಿ ಗಡಿ ಸಂಘರ್ಷ ಮತ್ತು ಕಾಶ್ಮೀರ ವಿಚಾರವಾಗಿ ಒಮ್ಮತ ಮೂಡಿಸಲು ಕೇಂದ್ರ ಸರ್ಕಾರ ಸಭೆ ನಡೆಸಿ ಪ್ರಮುಖ ರಾಜಕೀಯ ಪಕ್ಷಗಳಿಗೆ ವಿವರಣೆ ನೀಡಿತು.
-ಎನ್.ಬಿ.