ಮೈಸೂರು

ಡಾ. ಲಲಿತಾ ಶ್ರೀನಿವಾಸನ್ ಮುಡಿಗೇರಿದ ನಾಟ್ಯ ಕಲೋತ್ತುಂಗ ಪ್ರಶಸ್ತಿ

ಖ್ಯಾತ ಭರತನಾಟ್ಯ ವಿದ್ವಾಂಸೆ ಡಾ.ಲಲಿತಾ ಶ್ರೀನಿವಾಸನ್ ಅವರಿಗೆ ಕಲಾ ಸಂದೇಶ ಪ್ರತಿಷ್ಠಾನದ ವತಿಯಿಂದ ಅ.15 ರಂದು ಜಗನ್ಮೋಹನ ಅರಮನೆಯಲ್ಲಿ ‘ನಾಟ್ಯ ಕಲೋತ್ತುಂಗ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ಕಲಾಭಿವರ್ಧನ-2016 ರ ಸಂಗೀತ-ನಾಟ್ಯ ಉತ್ಸವದ ಎರಡನೇ ದಿನ ಡಾ.ಡಿ ಉಮಾಪತಿ ಮತ್ತು ವಿದುಷಿ ಡಾ.ವಸುಂಧರಾ ದೊರೆಸ್ವಾಮಿ ಅವರು ಡಾ.ಲಲಿತಾ ಶ್ರೀನಿವಾಸನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಕರ್ನಾಟಕ ನೃತ್ಯ ಕಲಾ ಪರಿಷತ್ ನ ಅಧ್ಯಕ್ಷರಾದ ಸಾಯಿ ವೆಂಕಟೇಶ್ ಮಾತನಾಡಿ,  ನಾಟ್ಯ ಕ್ಷೇತ್ರದಲ್ಲಿ ಲಲಿತಾ ಶ್ರೀನಿವಾಸನ್ ಅವರು ನೀಡಿರುವ ಕೊಡುಗೆ ಅಮೋಘವಾದುದು. ಈ ಸಂದರ್ಭ ಮೈಸೂರಿಗರಿಗೆ ಹೆಮ್ಮೆ ಅನಿಸುತ್ತದೆ. ನೂಪುರ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಪ್ರಚಾರ ಕಾರ್ಯ ನಿಜಕ್ಕೂ ದೊಡ್ಡ ಸಾಧನೆಯೇ ಆಗಿದೆ. ಕರ್ನಾಟಕ ಸರ್ಕಾರ ಮಾಡದಿರುವ ಕೆಲಸಗಳನ್ನು ಈ ನೂಪುರ ಸಂಸ್ಥೆ ಮಾಡಿದೆ ಎಂದು ಸಂಸ್ಥೆಯ ಸಾಧನೆಯನ್ನು ಸ್ಮರಿಸಿದರು. ಆದರೆ, ರಾಜ್ಯದಲ್ಲಿ ಅದ್ಭುತ ಕಲೆಗಾರರಿದ್ದರೂ ಈವರೆಗೆ ಕನ್ನಡಿಗರಿಗೆ ‘ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’ ಬಂದಿಲ್ಲದಿರುವುದು ನಾಚಿಕೆಗೇಡಿನ ವಿಷಯ. ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕಲಾವಿದರಿಗೆ ಯಾವ ಮನ್ನಣೆಯು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಖ್ಯಾತ ಭರತನಾಟ್ಯ ವಿದ್ವಾಂಸೆ ವಸುಂಧರಾ ದೊರೆಸ್ವಾಮಿ ಮಾತನಾಡಿ, ಲಲಿತಾ ಶ್ರೀನಿವಾಸನ್ ನಡೆದು ಬಂದ ಸಾಧನೆಯ ಹಾದಿಯನ್ನು ಸ್ಮರಿಸಿದರು. ವೃತ್ತಿ ಮತ್ತು ಪ್ರವೃತ್ತಿಯನ್ನು ಸರಿದೂಗಿಸಿಕೊಂಡು ಹೋಗಬೇಕಾಗಿರುವುದು ತುಂಬಾ ಮುಖ್ಯವಾದ ವಿಚಾರ. ಪ್ರಶಸ್ತಿ ಪುರಸ್ಕೃತೆ ಡಾ.ಲಲಿತಾ ಶ್ರೀನಿವಾಸನ್ ಈ ಅದ್ಭುತ ಸಂದರ್ಭವನ್ನು ಸೃಷ್ಟಿಸಿ ಎಂದೂ ಕಾಣದ ಅಭಿನಂಧನೆಯನ್ನು ಸಲ್ಲಿಸಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಇದೇ ರೀತಿಯಾಗಿ ಕಲಾವಿದರನ್ನು ಗುರುತಿಸಿ ಸನ್ಮಾನ ಮಾಡಿ ಆದರಿಸುವ ಉತ್ತಮ ಕೆಲಸ ಪ್ರವರ್ಧಮಾನಕ್ಕೆ ಬಂದು ಕರ್ನಾಟಕದ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಲಿ ಎಂದು ಹಾರೈಸಿದರು.

ನಂತರ ಡಾ.ಲಲಿತಾ ಶ್ರೀನಿವಾಸನ್ ಸಂಯೋಜನೆಯ ಬೆಂಗಳೂರು ನೂಪುರ ಕಲಾವಿದರು ನಡೆಸಿಕೊಟ್ಟ ‘ನೃತ್ಯ ಕರ್ನಾಟಕ’ ನೃತ್ಯರೂಪಕ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಕಲಾಪೋಷಕ ಟಿ.ಆರ್.ಹರೀಶ್, ಭರತನಾಟ್ಯ ವಿದ್ವಾಂಸರಾದ ರಾಮಮೂರ್ತಿ ರಾವ್, ಆರ್. ಕಣ್ಣನ್, ಡಾ.ತುಳಸಿ ರಾಮಚಂದ್ರ, ಕೃಪಾ ಫಡ್ಕೆ ಮತ್ತು ಅಧ್ಯಕ್ಷ ಡಾ.ಡಿ.ಉಮಾಪತಿ ಹಾಜರಿದ್ದರು.

 

Leave a Reply

comments

Related Articles

error: