ದೇಶಪ್ರಮುಖ ಸುದ್ದಿವಿದೇಶ

BRICS ಜೊತೆ BIMSTEC ರಾಷ್ಟ್ರಗಳ ಬೆಸುಗೆ: ಚೀನಾ-ಪಾಕಿಸ್ತಾನ ತಂತ್ರಕ್ಕೆ ಮೋದಿ ಪ್ರತಿತಂತ್ರ

ವಿಶ್ವದ ಶೇ.50 ರಷ್ಟು ಜನಸಂಖ್ಯೆ ಒಳಗೊಳ್ಳುವ, ಶೇ. 25ರಷ್ಟು ಜಿಡಿಪಿ ಹೊಂದಿರುವ ಒಕ್ಕೂಟವಾದ ಬ್ರಿಕ್ಸ್ ರಾಷ್ಟ್ರಗಳ ಸಮಾವೇಶ ಗೋವಾದಲ್ಲಿ ನಡೆಯುತ್ತಿರುವುದು ವಿಶ್ವಾದ್ಯಂತ ಹಲವು ಮುಂದುವರಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಈ ಸಮ್ಮೇಳನದತ್ತ ತಿರುಗಿ ನೋಡುವಂತಾಗಿದೆ.

ವಿಶ್ವ ಮಟ್ಟದಲ್ಲಿ ಮತ್ತು ಪ್ರಾದೇಶಿಕ ಮಟ್ಟದಲ್ಲಿಯೂ ಪ್ರಬಲ ನಾಯಕರಾದ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್, ಚೀನಾ ಅಧ್ಯಕ್ಷ ಕ್ಸೀ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದಕ್ಷಿಣ ಆಫ್ರಿಕ ಅಧ್ಯಕ್ಷ ಜಾಕೋಬ್ ಜುಮಾ, ಬ್ರೆಜಿಲ್ ದೇಶದ ನೂತನ ಅಧ್ಯಕ್ಷ ಟೆಮರ್ ಅವರುಗಳು ಒಂದೆಡೆ ಸಮಾವೇಶಗೊಳ್ಳುವುದು ಪ್ರತಿವರ್ಷದ ಬ್ರಿಕ್ಸ್ ಸಮ್ಮೇಳನದ ಹೆಗ್ಗಳಿಕೆ.

ಇದರ ಜೊತೆ ಬಂಗಾಳ ಕೊಲ್ಲಿ ದೇಶಗಳ ಸಹಕಾರ ಒಕ್ಕೂಟವಾದ ಏಳು ರಾಷ್ಟ್ರಗಳ “ಬೇ ಆಫ್ ಬೆಂಗಾಲ್ ಮಲ್ಟಿಸೆಕ್ಟ್ರಲ್ ಟೆಕ್ನಿಕಲ್ ಅಂಡ್ ಎಕನಾಮಿಕ್ ಕೋ-ಆಪರೇಷನ್ – BIMSTEC” ರಾಷ್ಟ್ರಗಳನ್ನು ಬೆಸೆಯುವುದರ ಮೂಲಕ ಭಾರತವು ಈ ಪ್ರದೇಶದ ಪ್ರಬಲ ಪ್ರಾದೇಶಿಕ ನಾಯಕ ದೇಶವಾಗಿ ಹೊರಹೊಮ್ಮುವ ಲಕ್ಷಣಗಳು ಕಾಣಸಿಗುತ್ತಿವೆ.

ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲಂಡ್, ಶ್ರೀಲಂಕಾ ದೇಶಗಳನ್ನೊಳಗೊಂಡ BIMSTEC ಒಕ್ಕೂಟ ಮತ್ತು ಬ್ರಿಕ್ಸ್ ದೇಶಗಳ ವಾಣಿಜ್ಯ ವ್ಯವಹಾರ ವಿಸ್ತರಣೆ ದೃಷ್ಟಿಯಿಂದ ಭೌಗೋಳಿಕವಾಗಿ ಪರಸ್ಪರ ಹತ್ತಿರದ ಮಾರುಕಟ್ಟೆಯಾಗಬಲ್ಲವು. ತೈಲ ಬೆಲೆಯ ಅನಿಶ್ಚಿತತೆ ಮತ್ತು ಉಕ್ರೇನ್ ವಶದಲ್ಲಿದ್ದ ಕ್ರಿಮಿಯಾ ಪರ್ಯಾಯ ದ್ವೀಪವನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡ ನಂತರ ಪಶ್ಚಿಮ ರಾಷ್ಟ್ರಗಳು ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ಹೇರಿವೆ. ಹೀಗಾಗಿ ರಷ್ಯಾ ತನ್ನ ಆರ್ಥಿಕ ಬೆಳವಣಿಗೆಯ ಸುಸ್ಥಿತಿ ಕಾಪಾಡಿಕೊಳ್ಳಲು ಪೂರ್ವ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳನ್ನೂ ಭಾಗಶಃ ಅವಲಂಬಿಸಬೇಕಾಗಿದೆ.

ಬ್ರೆಜಿಲ್, ದಕ್ಷಿಣ ಆಫ್ರಿಕಾ, ಚೀನಾ ದೇಶಗಳ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ. ಈ ದೇಶಗಳ ಆರ್ಥಿಕ ಬೆಳವಣಿಗೆ ದರ ಏರಿಕೆ ಕಾಣಲು ಸಾಧ್ಯವಾಗದೇ ಇರುವ ಈ ಪರಿಸ್ಥಿತಿಯಲ್ಲಿ ದಕ್ಷಿಣ ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳ ಸ್ಥಿರತೆ ಮತ್ತು ಭದ್ರತೆ ಕಾಪಾಡುವುದು, ಪರಸ್ಪರ ಆರ್ಥಿಕ ಸಹಕಾರ ನಿರೀಕ್ಷಿಸುವುದು ಸದ್ಯದ ಅಗತ್ಯ.

ಹಳೆಯ ಮಿತ್ರರಾಷ್ಟ್ರ ಪಾಕಿಸ್ತಾನವನ್ನು ವಿಭಜಿಸಲು ಹೊಂಚು ಹಾಕುತ್ತಿರುವ ಅಮೆರಿಕವು ದಕ್ಷಿಣ ಏಷ್ಯಾದ ಪರಿಸ್ಥಿತಿಯನ್ನು ದಿನೇ ದಿನೇ ಮತ್ತಷ್ಟು ಜಟಿಲಗೊಳಿಸುತ್ತಿದೆ. ಈ ದೃಷ್ಟಿಯಿಂದಲೂ ಬ್ರಿಕ್ಸ್ ಸಮ್ಮೇಳನದ ಭಾಗವಾಗಿ ದಕ್ಷಿಣ ಏಷ್ಯಾ ವ್ಯವಹಾರಗಳಲ್ಲಿ ರಷ್ಯಾದ ರಂಗಪ್ರವೇಶವು ಸದ್ಯದ ದ್ವೇಷಮಯ ವಾತಾವರಣವನ್ನು ತಿಳಿಗೊಳಿಸಲು ಸಹಕಾರಿಯಾಗಲಿದೆ.

ಭಾರತದ ಜೊತೆ ಹಲವು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿರುವ ರಷ್ಯಾ ನಿಯೋಗ, ವಾಯುದಾಳಿಯನ್ನು ಸಮರ್ಥವಾಗಿ ತಡೆಯಬಲ್ಲ ಅತ್ಯಾಧುನಿಕ ಎ-400 ಟ್ರಯಂಫ್ ವ್ಯವಸ್ಥೆಯನ್ನು ಭಾರತಕ್ಕೆ ಒದಗಿಸಲು ಒಪ್ಪಿಕೊಂಡಿದ್ದು, ಇದರ ಜೊತೆ ಸಮರ ಕಾಲದಲ್ಲಿ ಸಹಾಯಕ್ಕೆ ಬರಹುದಾದ ಹೆಲಿಕಾಪ್ಟರ್ ಗಳನ್ನೂ ಒದಗಿಸಲಿದೆ.

ಪ್ರಧಾನಿ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಭಾಗವಾಗಿ ರಕ್ಷಣಾ ಕ್ಷೇತ್ರದಲ್ಲಿ ರಷ್ಯಾದ ಸಹಕಾರ ಬಹಳ ಮಹತ್ವದ್ದಾಗಿದೆ. ವಾರ್ಷಿಕ “ರಕ್ಷಣಾ ಕೈಗಾರಿಕಾ ಸಮ್ಮೇಳನ” ನಡೆಸಲು ಸಹಮತಕ್ಕೆ ಬಂದಿರುವುದು ದಕ್ಷಿಣ ಏಷ್ಯಾದ ಸ್ಥಿರತೆ ಕಾಪಾಡು ನಿಟ್ಟಿನಲ್ಲಿ ರಷ್ಯಾ ದೇಶವು ತನ್ನ ಸಾಂಪ್ರದಾಯಿಕ ಮಿತ್ರ ಭಾರತಕ್ಕೆ ಬಲ ತುಂಬಿದಂತಾಗಿದೆ.

ಭೌಗೋಳಿಕವಾಗಿ ಭಾರತವು ಆಯಕಟ್ಟಿನ ಸ್ಥಾನದಲ್ಲಿದ್ದು, ಪ್ರಪಂಚದ ವಾಣಿಜ್ಯ ವ್ಯವಹಾರಗಳಲ್ಲಿ ಅತಿ ಹೆಚ್ಚು ಚಟುವಟಿಕೆ ನಡೆಯುವ ಹಿಂದೂ ಮಹಾಸಾಗರ ವ್ಯಾಪ್ತಿಯ ನಿರ್ಣಾಯಕ ನಾಯಕತ್ವವನ್ನು ಪಡೆಯಲು ರಷ್ಯಾ ಸ್ನೇಹ ಭಾರತಕ್ಕೆ ಅತ್ಯಗತ್ಯ.

ಸಾರ್ಕ್ ಒಕ್ಕೂಟದಲ್ಲಿ ಮೂಲೆಗುಂಪಾದ ಪಾಕಿಸ್ತಾನವು ಚೈನಾ ಜತೆ ಸೇರಿ ಭಾರತಕ್ಕೆ ಸೆಡ್ಡು ಹೊಡೆಯಲು ರೂಪಿಸುತ್ತಿರುವ ಗ್ರೇಟರ್ ಸಾರ್ಕ್ ಒಕ್ಕೂಟವು ಯಶಸ್ವಿಯಾಗದಂತೆ ತಡೆಯಲು ಭಾರತವು ಬಂಗಾಳ ಕೊಲ್ಲಿ ವ್ಯಾಪ್ತಿಯ BIMSTEC ಒಕ್ಕೂಟ ರಾಷ್ಟ್ರಗಳನ್ನು ಬ್ರಿಕ್ಸ್ ಒಕ್ಕೂಟದೊಂದಿಗೆ ಬೆಸೆಯುವುದರ ಮೂಲಕ ತನ್ನ ಪ್ರಭಾವ ವಿಸ್ತರಿಸಬಹುದಾಗಿದೆ. ಈ ದೃಷ್ಟಿಯಿಂದ 1997 ರಲ್ಲಿ ಸ್ಥಾಪನೆಯಾಗಿ ಅರೆಜೀವ ಸ್ಥಿತಿಯಲ್ಲಿದ್ದ ಈ ಒಕ್ಕೂಟಕ್ಕೆ ಪ್ರಧಾನಿ ಮೋದಿಯವರು ಮತ್ತೆ ಜೀವ ತುಂಬಿದ್ದು, ಭಾರತವು ಈ ಪ್ರದೇಶದ ತನ್ನ ನಾಯಕತ್ವಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಿ ಚೀನಾ ಮತ್ತು ಪಾಕಿಸ್ತಾನದ ಪ್ರಯತ್ನಗಳನ್ನು ವಿಫಲಗೊಳಿಸಬಹುದಾಗಿದೆ.

Leave a Reply

comments

Related Articles

error: