ಮೈಸೂರು

ಧರ್ಮದಿಂದ ಅನಾಚಾರ ತೊಡೆದು ಹಾಕುವುದು ಸಾಧ್ಯ: ನ್ಯಾ.ರಾಮಾಜೋಯಿಸ್

ಧರ್ಮ ಮತ್ತು ರಿಲಿಜೀಯನ್ ಅನ್ನು ಇಂಗ್ಲಿಷ್‍ನಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ಧರ್ಮವು ಮನುಷ್ಯ ಹೇಗೆ ಬದುಕಬೇಕೆಂದು ತಿಳಿಸುವ ನಿಯಮವಾಗಿದೆ. ರಿಲಿಜೀಯನ್ ಎನ್ನುವುದು ಆತ ಯಾವ ದೇವರನ್ನು ಪೂಜೆ ಮಾಡುತ್ತಾನೆ ಎಂಬುದಾಗಿದೆ. ಎಲ್ಲರೂ ಮನುಷ್ಯರಾಗಿ ಬದುಕುವುದು ಮುಖ್ಯ. ಇದನ್ನು ತಿಳಿಸುವ ಜವಾಬ್ದಾರಿ ಬ್ರಾಹ್ಮಣರ ಮೇಲಿದೆ. ಬ್ರಾಹ್ಮಣರು ಸಮಾಜದ ಮುಂಚೂಣಿಯಲ್ಲಿದ್ದು, ಅವರ ನಡತೆಯಲ್ಲಿ ತಪ್ಪು ಮಾಡಬಾರದು ಎಂದು ಮಾಜಿ ರಾಜ್ಯಪಾಲ ನ್ಯಾ.ರಾಮಾಜೋಯಿಸ್ ತಿಳಿಸಿದರು.

ಗನ್‍ಹೌಸ್ ಬಳಿಯಿರುವ ಶಂಕರಮಠದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಶನಿವಾರ ಆರಂಭಗೊಂಡ ಎರಡು ದಿನಗಳ ರಾಜ್ಯ ಮಟ್ಟದ ಬ್ರಾಹ್ಮಣ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಧರ್ಮದ ಮಾರ್ಗದಲ್ಲಿ ನಡೆದರೆ ದೇಶದಲ್ಲಿ ಉಂಟಾಗಿರುವ ಭ್ರಷ್ಟತೆ, ಅನಾಚಾರದಲ್ಲಿ ತೊಡೆದು ಹಾಕಲು ಸಾಧ್ಯ. ಧರ್ಮ, ಅರ್ಥ, ಕಾಮವನ್ನು ತ್ರಿವರ್ಗಗಳೆಂದು ಕರೆಯುತ್ತಾರೆ. ಹಣ, ಆಸೆ ಇಲ್ಲದೆ ಬದುಕುವುದು ಕಷ್ಟ. ಮಹಿಳೆಯರ ಮನ ನೋಯಿಸಿದರೆ ಯಾವ ಮನೆಯೂ ಉದ್ಧಾರ ಆಗಲ್ಲ. ಸ್ತ್ರೀಯರಿಗೆ ರಕ್ಷಣೆ ನೀಡುವುದು, ಸ್ವಾತಂತ್ರ್ಯ ನೀಡುವುದು ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದರು.

ಶಿಕ್ಷಣವನ್ನು ಮೂಲ ಹಕ್ಕಾಗಿ ಪರಿಗಣಿಸಬೇಕೆಂದು ವಿದ್ಯಾರ್ಥಿಗಳ ಪರವಾಗಿ ನಾನು 1994ರಲ್ಲಿ ವಾದ ಮಾಡಿದ್ದೆ. ಬರ್ತೃಹರಿಯ ‘ವಿದ್ಯಾವಿಹೀನ ಪಶು’ ಶ್ಲೋಕವನ್ನು ಉಲ್ಲೇಖಿಸಿದ್ದೆ. ಸುಪ್ರೀಂ ಕೋರ್ಟ್ ಇದನ್ನು ಒಪ್ಪಿಕೊಂಡು ಶಿಕ್ಷಣವನ್ನು ಮೂಲಭೂತ ಹಕ್ಕೆಂದು ತೀರ್ಪು ನೀಡಿತು. ಆದರೆ, ಶಿಕ್ಷಣವನ್ನು ಮೂಲ ಹಕ್ಕೆಂದು ತಿದ್ದುಪಡಿ ಮಾಡಲು ಸಂಸತ್ತಿಗೆ 7-8 ವರ್ಷ ಹಿಡಿಯಿತು ಎಂದು ಹೇಳಿದರು.

ಮೈಸೂರಿನ ಅವಧೂತ ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ವಿಜಯಾನಂದ ಸ್ವಾಮೀಜಿ ಮಾತನಾಡಿ, ಯಾರೋ ನಗುತ್ತಾರೆ ಎನ್ನುವ ಕಾರಣಕ್ಕೆ ಬ್ರಾಹ್ಮಣರು ತಮ್ಮ ಸಂಪ್ರದಾಯವನ್ನು ಬಿಡಬಾರದು. ಬ್ರಾಹ್ಮಣರು ಆತ್ಮವಿಶ್ವಾಸದಿಂದ ಮುನ್ನಡೆದರೆ ಗೌರವ ಸಿಗುತ್ತದೆ. ಮುಂದಿನ ಬ್ರಾಹ್ಮಣ ಯುವ ಸಮಾವೇಶ ಅವಧೂತ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿ ಎಂದರು.

ಮುಳ್ಳೂರು ಗಣೇಶ್‍ಪ್ರಸಾದ್, ಶಾಶ್ವತಿ ಕ್ರಿಯಾ ಸಮಿತಿಯ ಭಾನುಪ್ರಕಾಶ್ ಶರ್ಮಾ, ಸಚಿವ ಎಸ್.ಎ. ರಾಮದಾಸ್, ಮಾಜಿ ಬಿಜೆಪಿ ಮುಖಂಡ ಎಚ್.ವಿ. ರಾಜೀವ್, ವಂಗೀಪುರ ಮಠದ ಇಳ್ಳೈ ಆಳ್ವಾರ್ ಸ್ವಾಮೀಜಿ, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಗಾಯಕಿ ಅರ್ಚನಾ ಉಡುಪ ಮತ್ತು ಇತರರು ಇದ್ದರು.

Leave a Reply

comments

Related Articles

error: