
ಪ್ರಮುಖ ಸುದ್ದಿ
ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು
ಪ್ರಮುಖ ಸುದ್ದಿ, ಕೊಳ್ಳೇಗಾಲ, ಜು.೧೫: ಪುಷ್ಕರಣಿಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಮಾದೇಶ(೪೫) ಮೃತ ದುರ್ದೈವಿ. ಈತ ಕೆ.ಗುಂಡಾಪುರ ಗ್ರಾಮದ ನಿವಾಸಿಯಾಗಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ತನ್ನ ಕುಟುಂಬದೊಡನೆ ಬೆಂಗಳೂರಿನಲ್ಲಿ ವಾಸವಿದ್ದನೆಂದು ಹೇಳಲಾಗಿದ್ದು ವೆಲ್ಡಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕೌಟುಂಬಿಕ ಕಲಹದಿಂದ ಜಿಗುಪ್ಸೆಗೊಂಡಿದ್ದ ಎನ್ನಲಾಗುತ್ತಿದ್ದು ಕುಡಿದ ಅಮಲಿನಲ್ಲಿ ನೀರಿಗೆ ಬಿದ್ದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳಕ್ಕೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಎಂ.ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನಂತರ ವ್ಯಕ್ತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ ಬಿ.ಎಂ)