ಮೈಸೂರು

ಜೋನಿತಾ ಹಾಡಿಗೆ ತಲೆದೂಗಿದ ಪ್ರೇಕ್ಷಕರು

ಶನಿವಾರ ಸಾಯಂಕಾಲ ಯುವ ಜೋಡಿಗಳು ತಮ್ಮ ಸಂಗಾತಿಗಳೊಂದಿಗೆ ಕಣ್ಣುಗಳಲ್ಲೇ ಮಾತನಾಡಿಕೊಂಡರೆ, ದಾಂಪತ್ಯದ ಸಿಹಿ ಅನುಭವಿಸಿದವರು ತಮ್ಮ ಪ್ರೀತಿಯ ಆರಂಭದ ದಿನಗಳನ್ನು ಮೆಲುಕು ಹಾಕಿದರು. ಅಂತಹ ಒಂದು ಸನ್ನಿವೇಶಕ್ಕೆ ಮುನ್ನುಡಿ ಬರೆದಿದ್ದು ಮೈಸೂರು ಅರಮನೆಯ ಹೊರಾವರಣ.

ಕಾರಣವಿಷ್ಟೆ. ಇಂಡೋ-ಕೆನಡಿಯನ್ ಗಾಯಕಿ ಜೋನಿತಾ ಗಾಂಧಿ ಜನಪ್ರಿಯ ಪ್ರೇಮಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಕೊಂಡೊಯ್ದರು. ಮೈ ಪರೇಶಾನ್, ಪರೇಶಾನ್ ಗೀತೆಯೊಂದಿಗೆ ಆರಂಭವಾದ ಗಾಯನಕ್ಕೆ ಪ್ರೇಕ್ಷಕರು ತಲೆದೂಗಿದರು.

ಮೈಸೂರು ಶಾಪಿಂಗ್ ಫೆಸ್ಟಿವಲ್ ಆಯೋಜಿಸಿದ್ದ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಧಾನ ಪರಿಷತ್ ಸದಸ್ಯ ಸಂದೇಶ ನಾಗರಾಜ್ ಅವರು ಮಾತನಾಡಿ ರಾಜ್ಯದ ಪ್ರವಾಸೋದ್ಯಮ ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮೈಸೂರು ಸುತ್ತಮುತ್ತ ಹಲವಾರು ಪ್ರವಾಸಿ ತಾಣಗಳಿವೆ. ಆದರೂ ನಾವು ಅವುಗಳಿಂದ ಲಾಭ ಪಡೆಯುತ್ತಿಲ್ಲ. ಕೇರಳ ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಎಂದು ಬೇಸರ ವ್ಯಕ್ತಪಡಿಸಿದರು.  ಕಾವೇರಿ ವಿವಾದದಿಂದಾಗಿ ವ್ಯಾಪಾರ-ವಹಿವಾಟು ಸರಿಯಾಗಿ ನಡೆದಿಲ್ಲ. ದಸರಾ ಯಶಸ್ವಿಯಾಗಿ ಮುಕ್ತಾಯಗೊಂಡಿದೆ  ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿ ಡಾ. ನಾಗರಾಜ್, ಮಹಾನಗರ ಪಾಲಿಕೆ ಆಯುಕ್ತ ಜಿ. ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಶಾಸಕ ಸೋಮಶೇಖರ್, ಮೈಸೂರು ಶಾಪಿಂಗ್ ಫೆಸ್ಟಿವಲ್ ಅಧ್ಯಕ್ಷ ಪ್ರಶಾಂತ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಶನ್ ಅಧ್ಯಕ್ಷ ಜೈಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

jonita-2

Leave a Reply

comments

Related Articles

error: