ಕರ್ನಾಟಕ

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ

ಕೊಡಗು ಕರ್ನಾಟಕ ಕಾಶ್ಮೀರವೆಂದು ಗುರುತಿಸಿಕೊಂಡಿದೆ. ಇಲ್ಲಿನ ಸುಂದರ ಪ್ರಕೃತಿ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಕೊಡಗಿನ ಕಾಫಿಯಂತೂ ವಿಶ್ವದಲ್ಲೇ ಪ್ರಸಿದ್ಧ. ಗುಡ್ಡ ಬೆಟ್ಟಗಳು-ಜಲಪಾತಗಳಿಗೆ ಹೆಸರಾದ ಕೊಡಗು ಜಿಲ್ಲೆ ಜೀವನದಿ ಕಾವೇರಿಯ ಉಗಮ ಸ್ಥಾನವೂ ಆಗಿದೆ.

ಕೊಡಗಿನ ಜನರನ್ನು ಕೊಡವರು ಎಂದೇ ಗುರುತಿಸಲ್ಪಟ್ಟಿದ್ದು, ಕೊಡವರು ಕಾವೇರಿಗೆ ತಮ್ಮದೇ ವಿಶೇಷ ಸ್ಥಾನ ನೀಡಿದ್ದು, ಆಕೆ ದೇವತೆಯಾಗಿ ಪೂಜಿಸಲ್ಪಡುತ್ತಾಳೆ. ತಲಕಾವೇರಿ ಕಾವೇರಿಯ ಉಗಮ ಸ್ಥಾನವಾಗಿದ್ದು, ಮನೆಯಲ್ಲಿ ಹೊಸಕಂದನ ಆಗಮನವಾದರೆ ಅದರ ತಂದೆ-ತಾಯಿ ಒಂದು ವರ್ಷದೊಳಗೆ ಮಗುವನ್ನು ತಲಕಾವೇರಿಗೆ ಕರೆದೊಯ್ದು ಪೂಜೆ ಸಲ್ಲಿಸಿ ತಾಯಿಯ ಆಶೀರ್ವಾದ ಪಡೆದು ಬರುತ್ತಾರೆ. ಅಷ್ಟೇ ಅಲ್ಲದೇ ಮದುವೆಯಾದ ನವ ದಂಪತಿಗಳೂ ಸಹ ತಮ್ಮ ಮುಂದಿನ ಜೀವನ ಚೆನ್ನಾಗಿರಲಿ, ವಂಶಾಭಿವೃದ್ಧಿಯಾಗಲಿ ಎಂದು ಆಶಿಸಿ ತಾಯಿಯ ಸೇವೆಗೆ ಬರುತ್ತಾರೆ. ಮನೆಯಲ್ಲಿ ಮರಣ ಸಂಭವಿಸಿದಾಗಲೂ ತಲಕಾವೇರಿಗೆ ಭೇಟಿ ನೀಡಿ ಕಾವೇರಿ ಮಾತೆಯನ್ನು ಪೂಜಿಸುವುದನ್ನು ಮರೆಯುವುದಿಲ್ಲ.

ತಲಕಾವೇರಿಯಲ್ಲಿ ಪ್ರತಿ ವರ್ಷವೂ ತುಲಾ ಸಂಕ್ರಮಣದಂದು ತಾಯಿ ಕಾವೇರಿಯು ಭಕ್ತರಿಗೆ ತೀರ್ಥರೂಪದಲ್ಲಿ ದರ್ಶನ ನೀಡುತ್ತಾಳೆ. ಅಕ್ಟೋಬರ್ 17ರಂದು ಬೆಳಿಗ್ಗೆ 6.29ಕ್ಕೆ ತುಲಾ ಲಗ್ನದಲ್ಲಿ ಜೀವನದಿ ಕಾವೇರಿಯ ತೀರ್ಥೋದ್ಭವವಾಗಲಿದೆ. ಪವಿತ್ರ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಿ ಬರುವ ಕಾವೇರಿಯನ್ನು ಬರಮಾಡಿಕೊಳ್ಳಲು ಕ್ಷಣಗಣನೆ ನಡೆದಿದ್ದು, ಭಕ್ತರು ಕಾತುರದಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

Leave a Reply

comments

Related Articles

error: