ಲೈಫ್ & ಸ್ಟೈಲ್

ಕರಿಬೇವು ಕೇವಲ ಒಗ್ಗರಣೆಗಷ್ಟೇ ಅಲ್ಲ, ಆರೋಗ್ಯಕ್ಕೂ ಉತ್ತಮ

download-webಕರಿಬೇವು ಇಲ್ಲದಿದ್ದರೆ ಅಡುಗೆ ಇಲ್ಲ ಎಂಬಷ್ಟರ ಮಟ್ಟಿಗೆ ಜನಪ್ರಿಯ ಈ ಸೊಪ್ಪು. ಕೇವಲ ಒಗ್ಗರಣೆಗಷ್ಟೇ ಸೀಮಿತವಾಗಿರುವ ಈ ಸೊಪ್ಪು ಆರೋಗ್ಯ ವೃದ್ಧಿಗೆ ಅವಶ್ಯಕವಾದ ಅಂಶಗಳನ್ನು ಹೊಂದಿದ್ದು ಉದರ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ. ಕರಿಬೇವು ಸಾಮಾನ್ಯವಾಗಿ ಅಡುಗೆಮನೆಯ ಹಿಂದಿನ ಅಂಗಳದಲ್ಲಿ ಬೆಳೆಯುವ ಒಂದು ಪುಟ್ಟ ಮರ. ಮನೆಯ ಸುತ್ತಲಿನ ಜಾಗ ಎಷ್ಟೇ ಸಣ್ಣದೆನಿಸಿದರೂ ಕರಿಬೇವಿನ ಸಸ್ಯವನ್ನು ನೆಟ್ಟು ಬೆಳೆಸುವುದು ಏನೇನೂ ಕಷ್ಟವಲ್ಲ.

ಕರಿಬೇವಿನಿಂದ ಮಾಡುವ ಚಟ್ನಿ, ಮಸಾಲೆ ಪುಡಿ, ಸಾಂಬಾರು ಪುಡಿ, ಸಾರು, ಹುಳಿ, ಪಲ್ಯ, ಕೋಸಂಬರಿ, ನೀರು, ಮಜ್ಜಿಗೆ ತಯಾರಿಯಲ್ಲಿ ಪರಿಮಳ ಮತ್ತು ರುಚಿಗಾಗಿ ಈ ಸೊಪ್ಪನ್ನು ಬಳಸುತ್ತಾರೆ. ಈ ಗುಣಗಳಿಗೆ ಅದರಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ ಕಾರಣ. ಎಲೆಗಳಲ್ಲಿ ’ಎ’ ಜೀವಸತ್ವ, ಕಬ್ಬಿಣ, ಸುಣ್ಣ, ನಾರಿನ ಅಂಶಗಳು ಹೇರಳವಾಗಿವೆ. ಹೀಗಾಗಿಯೇ ಈ ಸೊಪ್ಪು ಪೌಷ್ಟಿಕ ಮತ್ತು ಚೈತನ್ಯದಾಯಕ.

ಕರಿಬೇವು ರಸದೊಂದಿಗೆ ನಿಂಬೆ ಹಣ್ಣಿನ ರಸ ಮತ್ತು ಸ್ವಲ್ಪ ಸಕ್ಕರೆಯನ್ನು ಮಿಶ್ರಣವನ್ನು ಮಾಡಿ ಕುಡಿದರೆ ಪಿತ್ತದಿಂದಾಗಿರುವ ವಾಂತಿಯು ನಿಲ್ಲುತ್ತದೆ. ಕರಿಬೇವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅರುಚಿ, ಜಠರ ರೋಗಗಳು, ಮೂಳೆ ರೋಗ, ಹೊಟ್ಟೆ ಹುಳು ಬಾಧೆ, ಆಮಶಂಕೆ, ಭೇದಿ ಮುಂತಾದ ರೋಗಗಳನ್ನು ಅದು ತಡೆಗಟ್ಟುತ್ತದೆ. ಪ್ರತಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಏಳು- ಎಂಟು ಬಲಿತ ತಾಜಾ ಎಳೆಗಳನ್ನು ಜಗಿದು ಸೇವಿಸಿದಲ್ಲಿ ಮಧುಮೇಹ, ಸ್ಥೂಲಕಾಯವನ್ನು ತಡೆಗಟ್ಟಬಹುದು. ಕರಿಬೇವಿನ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಗಾಳಿಯಾಡದಂತೆ ಸೀಸೆಗಳಲ್ಲಿ ಭದ್ರಪಡಿಸಿ ಇಟ್ಟಲ್ಲಿ ತುಂಬಾ ದಿನ ಉಳಿಯುತ್ತದೆ.

recipe-condiment-web

ಕರಿಬೇವು ಚಟ್ನಿಪುಡಿ

ಕರಿಬೇವಿನಚಟ್ನಿಪುಡಿ ಬಹೂಪಯೋಗಿ. ಮಾಡುವ ವಿಧಾನ ಬಹು ಸರಳ.

ಬೇಕಾಗುವ ಸಾಮಗ್ರಿಗಳು

15- ಎಸಳು ಬೆಳ್ಳುಳ್ಳಿ, 10- ಕೆಂಪು ಮೆಣಸು, ನೆಲ್ಲಿಕಾಯಿ ಗಾತ್ರದ- ಹುಣಸೇಹಣ್ಣು ,  ಅರ್ಧ ಕಪ್- ಒಣಕೊಬ್ಬರಿ ತುರಿ, ಎರಡು ಚಮಚ- ಜೀರಿಗೆ,  ಅರ್ಧ ಚಮಚ- ಮೆಂತ್ಯೆ,  ಕಾಲು ಕಪ್- ಕರಿಬೇವಿನ ಎಲೆ, ರುಚಿಗೆ ತಕ್ಕಷ್ಟು- ಉಪ್ಪು.

ತಯಾರಿಸುವ ವಿಧಾನ: ಕೆಂಪು ಮೆಣಸು, ಮೆಂತ್ಯೆ, ಕರಿಬೇವಿನ ಎಲೆಗಳನ್ನು ತಲಾ ಎರಡು ಚಮಚ ತೆಂಗಿನೆಣ್ಣೆ ಜತೆಗೆ ಪ್ರತ್ಯೇಕವಾಗಿ ಹುರಿದಿಟ್ಟುಕೊಳ್ಳಿ. ಬಳಿಕ ಇವುಗಳನ್ನು ಮಿಕ್ಸಿಗೆ ಹಾಕಿ, ಬೆಳ್ಳುಳ್ಳಿ, ಹುಣಸೇಹಣ್ಣು, ಉಪ್ಪು ಸೇರಿಸಿ ಪುಡಿ ಮಾಡಿ. ಗಾಳಿಯಾಡದ ಸೀಸೆಯಲ್ಲಿ ಹಾಕಿಟ್ಟರೆ ದೀರ್ಘಕಾಲ ಉಪಯೋಗಿಸಬಹುದು.

ಇಡ್ಲಿ, ದೋಸೆ, ಚಪಾತಿ, ಪೂರಿ, ಅನ್ನ ಹೀಗೆ ಎಲ್ಲದರ ಜತೆಗೂ ನೆಂಚಿಕೊಂಡು ಸವಿಯಬಹುದಾದ ರುಚಿಕರ ಚಟ್ನಿ ಇದು.

 

 

Leave a Reply

comments

Related Articles

error: