ದೇಶಪ್ರಮುಖ ಸುದ್ದಿ

ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ : 9 ಸದಸ್ಯರ ಸಮಿತಿ ರಚಿಸಿದ ಸಿಎಂ ಸಿದ್ದರಾಮಯ್ಯ

ನವದೆಹಲಿ, ಜುಲೈ 18 : ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಧ್ವಜ ರಚಿಸಿ ಕಾನೂನು ಮಾನ್ಯತೆ ನೀಡುವ ಸಂಬಂಧ ರಾಜ್ಯ ಸರ್ಕಾರವು 9 ಸದಸ್ಯರನ್ನು ಒಳಗೊಂಡ ಸಮಿತಿ ರಚನೆ ಮಾಡಿದೆ.

ಸಂವಿಧಾನದ 370ನೇ ವಿಧಿ ಅಡಿ ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ದೇಶದ ಯಾವುದೇ ರಾಜ್ಯ ಸರ್ಕಾರವು ಪ್ರತ್ಯೇಕ ಧ್ವಜ ಹೊಂದಿಲ್ಲ. ಸಂವಿಧಾನದಲ್ಲಿರುವ ಅವಕಾಶ ಬಳಸಿಕೊಂಡು ಕರ್ನಾಟಕ ಸರ್ಕಾರವು ಹೊಸ ಧ್ವಜ ರಚನೆ ಮಾಡಲು ನಿರ್ಧರಿಸಿದೆ. ಇದರಿಂದ ಜಮ್ಮು ಕಾಶ್ಮೀರದ ನಂತರ ಕರ್ನಾಟಕ ರಾಜ್ಯವು ಪ್ರಥಮ ಬಾರಿಗೆ ಪ್ರತ್ಯೇಕ ಧ್ವಜ ಹೊಂದಲು ನಿರ್ಧರಿಸಿದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 6 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಿದ್ದು, ಸಮಿತಿಯು ಹಿರಿಯ ಸಾಹಿತಿಗಳು ಹಾಗೂ ಚಿಂತಕರನ್ನು ಒಳಗೊಂಡಿದೆ. ಈ ಸಮಿತಿಯು ಅಧ್ಯಯನ ನಡೆಸಿ ಹಾಲಿ ಧ್ವಜವನ್ನೇ ಅಂಗೀಕರಿಸಬೇಕೆ ಅಥವಾ ಹೊಸದೊಂದು ಧ್ವಜವನ್ನು ಮಾನ್ಯ ಮಾಡಬೇಕೆ ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದೆ.

ಕರ್ನಾಟಕ ಸರ್ಕಾರವು ಹಳದಿ-ಕೆಂಪು ಮಿಶ್ರಿತ ಧ್ವಜವನ್ನು ನಾಡ ಧ್ವಜವನ್ನಾಗಿ ಸ್ವೀಕರಿಸಿದೆ. ಆದರೆ, ಇದಕ್ಕೆ ಯಾವುದೇ ಅಧಿಕೃತವಾದ ಮಾನ್ಯತೆ ಇಲ್ಲ. ಸಂವಿಧಾನದಲ್ಲಿ ಪ್ರತ್ಯೇಕ ಧ್ವಜ ಹೊಂದಲು ಅವಕಾಶವಿದೆ ಎಂದು ವಾದಿಸಿರುವ ರಾಜ್ಯ ಸರ್ಕಾರವು, ಪ್ರತ್ಯೇಕ ಸಮಿತಿ ರಚಿಸಿ ಧ್ವಜರಚನೆಗೆ ಸೂಚಿಸಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕಾನೂನಿನಲ್ಲಿ ಮಾನ್ಯತೆ ಇದೆಯೋ ಇಲ್ಲವೋ ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಬೇಕಿದೆ.

-ಎನ್.ಬಿ.

Leave a Reply

comments

Related Articles

error: