ಕರ್ನಾಟಕಪ್ರಮುಖ ಸುದ್ದಿ

ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ರಾಜ್ಯ ಸರ್ಕಾರ – ನಾಡಿನ ಗಣ್ಯರ ಒಮ್ಮತದ ನಿರ್ಧಾರ

ಬೆಂಗಳೂರು, ಜುಲೈ 18 : ವರ್ಷಾಂತ್ಯದೊಳಗೆ ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ನಾಡಿನ ಗಣ್ಯರು, ಹಿರಿಯ ಸಾಹಿತಿಗಳು ಹಾಗೂ ಕಲಾವಿದರ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಹೊರಹೊಮ್ಮಿತು.

ರಾಜ್ಯದಲ್ಲಿನ ಬರ ಪರಿಸ್ಥಿತಿಗೂ ಹಾಗೂ ವಿಶ್ವ ಕನ್ನಡ ಸಮ್ಮೇಳನ ಆಯೋಜನೆಗೂ ಅನಗತ್ಯವಾಗಿ ಸಂಬಂಧ ಕಲ್ಪಿಸಬಾರದು ಎಂಬುದು ಬಹುತೇಕ ವ್ಯಕ್ತಿಗಳ ಅನಿಸಿಕೆಯಾಗಿತ್ತು. ಅಲ್ಲದೆ, ಕನ್ನಡದ ತಿಂಗಳು ಎಂದೇ ಗುರುತಿಸಲ್ಪಡುವ ನವೆಂಬರ್ನಕಲ್ಲೇ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಬೇಕು ಎಂದು ಹಲವರು ಸಲಹೆ ನೀಡಿದರು. ಸಭೆಯ ಅಂತ್ಯದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ ಮೊದಲನೇ ಅಥವಾ ಎರಡನೇ ವಾರದಲ್ಲಿ ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ಹರ್ಷೋದ್ಗಾರಗಳ ನಡುವೆ ಪ್ರಕಟಿಸಿದರು.

ವಾರದೊಳಗೆ ಸಾಂಸ್ಕೃತಿಕ ನೀತಿ ಜಾರಿ – ಅಕಾಡೆಮಿಗಳಿಗೆ ನೇಮಕ

ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸುವ ಮುನ್ನ, ರಾಜ್ಯದ ಸಾಂಸ್ಕೃತಿಕ ನೀತಿಯನ್ನು ಜಾರಿಗೊಳಿಸಬೇಕು ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ವ್ಯಾಪ್ತಿಯ ವಿವಿಧ ಅಕಾಡೆಮಿಗಳಲ್ಲಿ ಖಾಲಿ ಇರುವ ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಬೇಕು ಎಂಬ ಹಿರಿಯ ಸಾಹಿತಿ ಕೆ. ವೈ. ನಾರಾಯಣ ಸ್ವಾಮಿ ಅವರ ಸಲಹೆಗೆ ಸ್ಪಂದಿಸಿದ ಸಿದ್ದರಾಮಯ್ಯ ಅವರು ಇನ್ನು ವಾರದೊಳಗೆ ಸಾಂಸ್ಕೃತಿಕ ನೀತಿಯನ್ನು ಜಾರಿಗೊಳಿಸಲಾಗುವುದು. ಅಲ್ಲದೆ, ವಿವಿಧ ಅಕಾಡೆಮಿಗಳಲ್ಲಿ ಖಾಲಿ ಇರುವ ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

ಸದ್ಯದಲ್ಲೇ ಬರಪೀಡಿತ ಪ್ರದೇಶಗಳ ಹೆಸರು-ವಿವರಗಳ ಘೋಷಣೆ

ರಾಜ್ಯದ 176 ತಾಲ್ಲೂಕುಗಳು ಕಳೆದ ವರ್ಷ ಮುಂಗಾರು ವೈಫಲ್ಯದಿಂದಾಗಿ 139 ತಾಲ್ಲುಕುಗಳನ್ನು ಹಾಗೂ ಹಿಂಗಾರು ವೈಫಲ್ಯದ ಹಿನ್ನೆಲೆಯಲ್ಲಿ 160 ತಾಲ್ಲೂಕುಗಳನ್ನು ಬರ-ಪೀಡಿತ ಎಂದು ಘೋಷಿಸಲಾಗಿತ್ತು. ಈ ವರ್ಷ ಜುಲೈ ತಿಂಗಳಲ್ಲಿ ಅರ್ಧ ಭಾಗವೇ ಕಳೆದರೂ ವರುಣ ಕೃಪೆ ತೋರಿಲ್ಲ. ಜಲಾಶಯಗಳಲ್ಲಿ ನೀರಿಲ್ಲ. ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ 84 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ, ಈ ಬಾರಿ ಅರ್ಧಕ್ಕಿಂತಲೂ ಕಡಿಮೆ ಅಂದರೆ ಕೇವಲ 40 ಟಿಎಂಸಿಯಷ್ಟು ನೀರು ಸಂಗ್ರಹಣೆ ಇದೆ. ವಸ್ತುಸ್ಥಿತಿಯನ್ನು ಅವಲೋಕಿಸುತ್ತಿರುವ ರಾಜ್ಯ ಸರ್ಕಾರ ಸದ್ಯದಲ್ಲೇ ಬರಪೀಡಿತ ಪ್ರದೇಶಗಳ ಹೆಸರು-ವಿವರಗಳನ್ನು ಘೋಷಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಮ್ಮೇಳನದಲ್ಲಿ ಸಂಭ್ರಮ ಇಲ್ಲದಿದ್ದರೂ, ಕನ್ನಡದ ಕಂಪು ಖಚಿತ!

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ರಾಜ್ಯದಲ್ಲಿ ವಾಡಿಕೆ ಮಳೆಗಿಂತಲೂ ಶೇಕಡಾ 24ರಷ್ಟು ಮಳೆಯ ಕೊರತೆ ಉಂಟಾಗಿದೆ. ರಾಜ್ಯದಲ್ಲಿ ಈ ವೇಳೆಗಾಗಲೇ 73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಇದೀಗ 28 ಲಕ್ಷ ಹೆಕ್ಟೇರ್ ಪ್ರದೇಶಲ್ಲಿ ಮಾತ್ರ ಬಿತ್ತನೆಯಾಗಿದೆ. ಇಂತಹ ಸನ್ನಿವೇಶದಲ್ಲಿ ವಿಶ್ವ ಕ್ನನಡ ಸಮ್ಮೇಳನದಲ್ಲಿ ಸಂಭ್ರಮ ತೋರ್ಪಡಿಸಲಾಗದಿದ್ದರೂ ಕನ್ನಡದ ಕಂಪು ಹೊರಸೂಸುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಸರ್ಕಾರ ಖಚಿತವಾಗಿ ಮಾಡಲಿದೆ ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೃಷಿ ಮಾರುಕಟ್ಟೆ ಮತ್ತು ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್. ಕೆ. ಪಾಟೀಲ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಖಾತೆ ನಿರ್ವಹಿಸಿದ ಬಿ. ಟಿ. ಲಲಿತಾ ನಾಯಕ್, ಲೀಲಾದೇವಿ ಆರ್ ಪ್ರಸಾದ್, ರಾಣಿ ಸತೀಶ್, ಗೋವಿಂದ ಎಂ ಕಾರಜೋಳ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಜಿ. ಸಿದ್ದರಾಮಯ್ಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ ಡಾ ಎಲ್. ಹನುಮಂತಯ್ಯ, ಡಾ ಮುಖ್ಯಮಂತ್ರಿ ಚಂದ್ರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಅರೆ ಭಾಷಾ, ಕೊಡವ, ಕೊಂಕಣಿ, ತುಳು ಹಾಗೂ ಬ್ಯಾರಿ ಅಕಾಡೆಮಿಗಳ ಅಧ್ಯಕ್ಷರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಸುಭಾಷ್ಚಂದ್ರ ಕುಂಟಿಯಾ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಭಿವೃದ್ಧಿ ಆಯುಕ್ತರೂ ಹಾಗೂ ಕೃಷಿ ಉತ್ಪನ್ನ ಆಯುಕ್ತರೂ ಆದ ಟಿ. ಎಂ. ವಿಜಯ ಭಾಸ್ಕರ್, ಲೋಕೋಪಯೋಗಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಮೂರನೇ ವಿಶ್ವ ಕನ್ನಡ ಸಮ್ಮೇಳನದ ನೋಡೆಲ್ ಆಧಿಕಾರಿ ಎಂ. ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಅವರೂ ಸೇರಿದಂತೆ ಹಲವು ಗಣ್ಯರು ಈ ಸಭೆಯಲ್ಲಿ ಪಾಲ್ಗೊಂಡರು.

-ಎನ್.ಬಿ.

Leave a Reply

comments

Related Articles

error: