ಮೈಸೂರು

ಸಮಸ್ಯೆ ಪರಿಹಾರಕ್ಕೆ ಪೌರ ಕಾರ್ಮಿಕರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು: ಪ್ರೊ.ಕಾಳೇಗೌಡ

ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಯಬೇಕಾದರೆ ಪೌರ ಕಾರ್ಮಿಕರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು ಎಂದು ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.

ಪ್ರಗತಿ ಸೇವಾ ಟ್ರಸ್ಟ್ ಮತ್ತು ನಾರಾಯಣ ಅಭಿಮಾನಿಗಳ ಬಳಗದ ಸಂಯುಕ್ತಾಶ್ರಯದಲ್ಲಿ ನಗರ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ಅವರಿಗೆ ಅಭಿನಂದನೆ ಹಾಗೂ ಪೌರಕಾರ್ಮಿಕರ ಬದುಕು ಮತ್ತು ಪರಿವರ್ತನೆ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಪೌರ ಕಾರ್ಮಿಕರು ಸಮಾಜವನ್ನು ಶುದ್ಧಗೊಳಿಸುವ ಪ್ರಮುಖರಾಗಿದ್ದು ಅವರ ಬದುಕು ಪರಿವರ್ತನೆಯಾಗಿ ಎಲ್ಲರಂತೆ ಬದುಕಲು ಪೌರಕಾರ್ಮಿಕರ ಅಭಿವೃದ್ಧಿ ಪ್ರಾಧಿಕಾರದ ಅಗತ್ಯತೆ ತುಂಬಾ ಇದೆ. ಇದನ್ನು ಸ್ಥಾಪಿಸುವ ಸಲುವಾಗಿ ಶಾಸಕ ಶ್ರೀನಿವಾಸಪ್ರಸಾದ್ ಸಚಿವರಾಗಿದ್ದ ಸಂದರ್ಭದಲ್ಲಿ ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಪ್ರಾಧಿಕಾರ ರಚನೆಯಾದರೆ ರಾಜ್ಯದ ಕಾರ್ಮಿಕರ ಸ್ಥಿತಿಗತಿಗಳಲ್ಲದೆ ಹೊರರಾಜ್ಯದ ಸ್ಥಿತಿಗತಿಗಳೂ ತಿಳಿಯುವುದಲ್ಲದೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನವೂ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಅನಾದಿ ಕಾಲದಿಂದಲೂ ಶರಣರು, ವಚನಕಾರರು, ಹೋರಾಟಗಾರರು, ಮೇಧಾವಿಗಳೆಲ್ಲರೂ ಜಾತೀಯತೆಯ ವಿರುದ್ಧ ಹೋರಾಡಿ, ನೊಂದು ಬೆಂದವರಿಗಾಗಿ ಮೀಸಲಾತಿ ಬೇಕು ಎಂದು ಪ್ರತಿಪಾದಿಸಿ ಅದರಲ್ಲಿ ಯಶ ಗಳಿಸಿದರು. ಆದರೆ, ಮಹಾನ್ ಮೇಧಾವಿ ಎನಿಸಿದ, ವಿಶ್ವಕಂಡ ಶ್ರೇಷ್ಠ ಇಂಜಿನಿಯರ್‌ಗಳಲ್ಲಿ ಒಬ್ಬರಾದ ಸರ್.ಎಂ.ವಿಶ್ವೇಶ್ವರಯ್ಯ ಅವರು ಮೀಸಲಾತಿಯನ್ನು ವಿರೋಧಿಸಿದರು. ಅಂಕಗಳ ಮಾನದಂಡದಲ್ಲಿ ನೌಕರಿ ನೀಡಬೇಕು ಎಂದು ಪ್ರತಿಪಾದಿಸುತ್ತಿದ್ದರು. ಆದರೆ, ಅಂಗವಿಕಲ ಸಾಮಾನ್ಯನೊಂದಿಗೆ ಓಡಲು ಸಾಧ್ಯವೆ, ರೈತನ ಮಗ ಉನ್ನತ ಹುದ್ದೆಯಲ್ಲಿರುವ ಮಗನ ಸಮಾನ ಅಂಕಗಳಿಸಲು ಸಾಧ್ಯವೆ ಎಂದು ಪ್ರಶ್ನಿಸಿದ ಅವರು, ಇದೆಲ್ಲವನ್ನೂ ಮನಗಂಡು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೀಸಲಾತಿಯನ್ನು ಅನುಷ್ಠಾನಗೊಳಿಸಿದರು ಎಂದು ತಿಳಿಸಿದರು.

ಇದೇ ವೇಳೆ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಪ್ರೊ.ಹೆಚ್.ಗೋವಿಂದಯ್ಯ, ಮಾಜಿ ಮೇಯರ್ ಪುರುಷೋತ್ತಮ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಮೈಸೂರು ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ರಾಮಸ್ವಾಮಿ, ಸಫಾಯಿ ಕರ್ಮಚಾರಿ ಆಯೋಗದ ರಾಜ್ಯ ಸಂಚಾಲಕ ಕೆ.ಬಿ.ಓಬಲೇಶ್, ಸಣ್ಣ ನೀರಾವರಿ ಇಲಾಖೆಯ ಮೈಸೂರು ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎನ್.ಶ್ರೀನಿವಾಸಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: