ಮೈಸೂರು

ಈರುಳ್ಳಿಗೆ ಬೆಂಬಲ ಬೆಲೆ ನಿಗದಿ ಮಾಡಿ: ಎನ್.ನಂಜೇಗೌಡ ಒತ್ತಾಯ

ರಾಜ್ಯದಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ವೈಜ್ಞಾನಿಕವಾದ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಿ ರೈತರನ್ನು ಉಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಹಾಗೂ ವಕೀಲ ಎನ್.ನಂಜೇಗೌಡ ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಗಣನೀಯವಾಗಿ ಕುಸಿತ ಕಾಣುತ್ತಿದೆ. ಇದರಿಂದ ಸಾಲಸೋಲ ಮಾಡಿ ಬೆಳೆ ಬೆಳೆದ ರೈತ ಕಂಗಾಲಾಗಿದ್ದಾನೆ. ಮಾಡಿದ ಸಾಲ ತೀರಿಸಲಾಗದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ದೇಶದಲ್ಲಿ ಕರ್ನಾಟಕ ಈರುಳ್ಳಿ ಬೆಳೆಯುವುದರಲ್ಲಿ ಎರಡನೇ ಸ್ಥಾನದಲ್ಲಿದ್ದು, ಗದಗ, ಬಾಗಲಕೋಟೆ, ಹಾವೇರಿ, ವಿಜಯಪುರ, ಚಿತ್ರದುರ್ಗ, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ 29.5 ಲಕ್ಷ ಟನ್ ಈರುಳ್ಳಿಯನ್ನು ಬೆಳೆಯಲಾಗುತ್ತಿದೆ. ಆದರೆ ಈರುಳ್ಳಿ ಬೆಲೆ ಕಡಿಮೆಯಾಗಿರುವುದರಿಂದ ರೈತರು ಕಂಗಾಲಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಬಹುದು. ಆದ್ದರಿಂದ ಸರ್ಕಾರ ಕೂಡಲೇ ಕ್ವಿಂಟಾಲ್ ಈರುಳ್ಳಿಗೆ 2667 ರೂ. ನಿಗದಿ ಮಾಡಬೇಕೆಂದು ಭಾನುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಒಂದು ಎಕರೆ ಈರುಳ್ಳಿ ಬೆಳೆಯಲು ಗೊಬ್ಬರ, ಕೂಲಿ, ಬಿತ್ತನೆ ಬೀಜ, ಕೀಟನಾಶಕ ಹಾಗೂ ಕಳೆನಾಶಕ, ಸಾಗಣೆ ಖರ್ಚು, ಈರುಳ್ಳಿ ತುಂಬುವ ಚೀಲ ಮತ್ತು ಸ್ಥಿರ ವೆಚ್ಚಗಳಾದ ಬೆಳೆ ವಿಮೆ, ಭೂಮಿ, ನೀರು ತೆರಿಗೆ, ನಿರ್ವಹಣಾ ವೆಚ್ಚ, ಕೃಷಿ ಪರಿಕರಗಳ ವೆಚ್ಚವೂ ಸೇರಿದಂತೆ ಒಟ್ಟು ಉತ್ಪಾದನಾ ವೆಚ್ಚ 1.33 ಲಕ್ಷ ರೂ.ಖರ್ಚಾಗುತ್ತದೆ. ಆದರೆ ಇಂದು ಈರುಳ್ಳಿ ಬೆಳೆಯುವ ರೈತರು 95,244 ರೂ. ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೇಂದ್ರ ಕೃಷಿ ಆಯೋಗ 2006ರಲ್ಲಿ ಸಲ್ಲಿಸಿದ ವರದಿಯಂತೆ ಬೆಳೆ ಬೆಳೆಯಲು ತಗುಲಿದ ಒಟ್ಟು ಖರ್ಚಿನ ಜೊತೆಗೆ ಶೇ.೫೦ರಷ್ಟನ್ನು ಸೇರಿಸಿ ಬೆಲೆ ನಿಗದಿ ಮಾಡಿದಾಗ ಮಾತ್ರ ರೈತ ಬದುಕಲು, ಕೃಷಿ ಸಾಲ ತೀರಿಸಲು ಸಾಧ್ಯವಾಗುತ್ತದೆ. ಕೃಷಿ ಕ್ಷೇತ್ರ ಬಹುತೇಕ ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿದ್ದು, ರಾಜ್ಯ ಸರ್ಕಾರ ಕೃಷಿ ಉತ್ಪನ್ನದ ಬೆಲೆಗಳನ್ನು ಕೇವಲ ಮಾರುಕಟ್ಟೆ ಶಕ್ತಿಗಳು ಬಾಹ್ಯ ವಿಚಾರಗಳ ಮೇಲೆ ನಿರ್ಧಾರವಾಗಲು ಬಿಡಬಾರದು ಎಂದು ಮನವಿ ಮಾಡಿದರು.

ರೈತರ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ, ಸ್ಥಿರವಾದ ಲಾಭದಾಯಕ ಬೆಲೆ ಕೊಡಿಸಬೇಕು. ಸರ್ಕಾರ ಈರುಳ್ಳಿಯನ್ನು ಕನಿಷ್ಟ ಬೆಂಬಲ ಮೂಲಕ ಖರೀದಿಸಿ ನ್ಯಾಯಾಬೆಲೆ ಅಂಗಡಿ ಮತ್ತು ಜಿಲ್ಲಾ ಹಾಪ್‌ಕಾಮ್ಸ್‌ಗಳ ಮೂಲಕ ಮಾರಾಟದ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ, ಖಜಾಂಚಿ ನಾಗೇಗೌಡ, ಸಿ.ಎಸ್. ನಾಗೇಶ್ ಇದ್ದರು.

Leave a Reply

comments

Related Articles

error: