ಕರ್ನಾಟಕಮೈಸೂರು

ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಹಣವಿದೆ; ರೈತರಿಗೆ ಪರಿಹಾರ ವಿತರಿಸಲು ಹಣವಿಲ್ಲವೇ: ಎಚ್‍ಡಿಕೆ ಟೀಕೆ

ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಹೊರಟಿರೋ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ರೈತರಿಗೆ ಪರಿಹಾರ ನೀಡಲು ಹಣವಿಲ್ಲದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಮೈಸೂರಿನಲ್ಲಿ  ಭಾನುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಹೆಚ್.ಡಿ. ಕುಮಾರಸ್ವಾಮಿ, ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಅತಿವೃಷ್ಟಿ-ಅನಾವೃಷ್ಟಿಯಿಂದ ಬೆಳೆ ನಷ್ಟ ಹೊಂದಿರುವ ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲವಂತೆ, ಹಾಗಿದ್ದಾಗ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಸಾವಿರದ ಎಂಟು ನೂರು ಕೋಟಿ ರೂ. ವೆಚ್ಚ ಮಾಡಲು ಸರ್ಕಾರದ ಬಳಿ ಎಲ್ಲಿಂದ ಹಣ ಬಂತು ಎಂದು ಪ್ರಶ್ನಿಸಿದರು.

ರೈತರಿಗೆ ಪರಿಹಾರ ನೀಡಿದರೆ ಏನೂ ಸಿಗೋದಿಲ್ಲ. ಸ್ಟೀಲ್ ಬ್ರಿಡ್ಜ್ ನಿರ್ಮಾಣದಲ್ಲಾದರೆ ಹಣ ಇವರ ಜೇಬು ಸೇರತ್ತೆ. ಅಷ್ಟೇ ಅಲ್ಲ ದೆಹಲಿಯ ಹೈಕಮಾಂಡಿಗೂ ಹಣ ತಲುಪಿಸಬಹುದು. ಅದಕ್ಕಾಗಿ ರೈತರಿಗೆ ಪರಿಹಾರ ನೀಡದಿದ್ದರೂ ಚಿಂತೆಯಿಲ್ಲ ಎಂದು ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಶ್ರೀನಿವಾಸ ಪ್ರಸಾದ್ ರಾಜೀನಾಮೆ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದ ಜಿಲ್ಲಾ ನಾಯಕರು ಈಗಾಗಲೇ ಅವರನ್ನು ಸಂಪರ್ಕಿಸಿದ್ದಾರೆ. ಜೆಡಿಎಸ್ ಗೆ ಬಂದರೆ ಅವರಿಗೆ ನಮ್ಮ ಸ್ವಾಗತವಿದೆ. ರೈತರಿಗೆ ಅನುಕೂಲವಾಗುವ ಪ್ರಾದೇಶಿಕ ಪಕ್ಷದ ಸರ್ಕಾರದ ಅವಶ್ಯಕತೆ ಅರಿತು ಜೆಡಿಎಸ್ ಗೆ ಸೇರ್ಪಡೆಗೊಂಡರೆ ಒಳ್ಳೆಯದು ಎಂದರು. ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕರಿಗೆ ಸಚಿವ ಸಂಪುಟದಿಂದ ಕೊಕ್ ನೀಡಿ ಭ್ರಷ್ಟಾಚಾರಿಗಳನ್ನು ಸಚಿವರನ್ನಾಗಿ ಮಾಡಿದೆ ಎಂದು ಲೇವಡಿಯಾಡಿದರು.

ಜಾಗ್ವಾರ್ ಚಿತ್ರ ಕುರಿತು ಪ್ರತಿಕ್ರಿಯಿಸಿದ ಅವರು ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು. ಶಾಸಕರಾದ ಸಾ.ರಾ. ಮಹೇಶ್, ಜಿ.ಟಿ. ದೇವೇಗೌಡ, ವಾಸು, ಚಿಕ್ಕಮಾದು ಹಾಗೂ ಪಕ್ಷದ ಹಲವು ಮುಖಂಡರು, ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

comments

Related Articles

error: