ಮೈಸೂರು

ಅನ್ನ ಮನುಷ್ಯನ ಮೂಲಭೂತ ಅಗತ್ಯ, ಅನುಭಾವ ಕಟ್ಟಕಡೆಯದು : ಡಾ. ಬಿ.ಎನ್ ವಾಸುದೇವಮೂರ್ತಿ

ಅಲ್ಲಮನ ಪ್ರಕಾರ ಪ್ರಭುತ್ವವು ದೋಷಪೂರ್ಣವಾದುದು. ಆಲೋಚನೆಗಳು ರೂಪ ಮತ್ತು ಚಿತ್ರಗಳಲ್ಲಿ ಬರುತ್ತದೆ ಎನ್ನುವುದು ಅಲ್ಲಮನ ಅಭಿಪ್ರಾಯ. ಅಲ್ಲಮನಿಗೆ ದಣಿವು ಇಲ್ಲ, ತಣಿವು ಇಲ್ಲ. ಅಲ್ಲಮನ ಸುಮಾರು 1300 ವಚನಗಳಲ್ಲಿ ಪ್ರಶ್ನೆಗಳೇ ಹೆಚ್ಚು. ಪಂಪನನ್ನೂ ಮೀರಿಸುವಂತಹ ಅಗಾಧ ಪ್ರಶ್ನಾಶಕ್ತಿ ಆತನಲ್ಲಿದೆ. ಆತ ಭಾವಶೂನ್ಯ. ಇಂದು ಒಬ್ಬ ಕನ್ನಡಿಗ ಜಿಜ್ಞಾಸೆ ಮಾಡುತ್ತಿದ್ದಾನೆಂದರೆ, ಅದು ಅಲ್ಲಮನ ಪ್ರಭಾವದಿಂದ ಎಂದು ವಿಮರ್ಶಕ ಮತ್ತು ಅನುವಾದಕ ಡಾ.ಬಿ.ಎನ್. ವಾಸುದೇವಮೂರ್ತಿ ಅಭಿಪ್ರಾಯಪಟ್ಟರು.

ಅವರು ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ಅ.16 ರಂದು ಕಲಾಮಂದಿರದ ಮನೆಯಂಗಳದಲ್ಲಿ ನಡೆದ‘ ಕನ್ನಡ ಚಿಂತನೆಯಲ್ಲಿ ಅಲ್ಲಮ ರೂಪುಗೊಂಡ ಬಗೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಲ್ಲಮನ ಚಿಂತನೆಯಲ್ಲಿ ಪ್ರಮುಖವಾದುದು ಸ್ವಯಂ ನಿರಾಕರಣೆ. ಆತ ಎಲ್ಲವನ್ನು ನಿರಾಕರಣೆ ಮಾಡಿದ್ದರಿಂದ ತನ್ನನ್ನು ಜಗತ್ತಿಗೆ ತೆರೆದುಕೊಂಡಿದ್ದಾನೆ. ಇದನ್ನು ಕನ್ನಡ ಭಾಷೆಯು ಸಹ ರೂಢಿಸಿಕೊಂಡಿದೆ. ಆದ್ದರಿಂದ ಕನ್ನಡ ಭಾಷೆ ಬೇರೆ ಭಾಷೆಗಳಿಗಿಂತ ಹೆಚ್ಚಾಗಿ ತನ್ನನ್ನು ಜಗತ್ತಿಗೆ ತೆರೆದುಕೊಂಡಿದೆ ಎಂದು ಹೇಳಿದರು.

ಹರಿಹರ, ರಾಘವಾಂಕ, ಕುವೆಂಪು ಮೊದಲಾದ ಕವಿಗಳು ಅಲ್ಲಮನ ಚಿಂತನೆಗಳನ್ನು ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿದ್ದಾರೆ. ಅಲ್ಲಮನ ಪ್ರಭಾವದಿಂದಾಗಿ ಕನ್ನಡ ಸಾಹಿತ್ಯ ಬೆಳೆಯುತ್ತಾ ಬಂದಿತು ಎನ್ನುವ ಬಗ್ಗೆ ಹಲವಾರು ಪುರಾವೆಗಳಿವೆ. ಬಿ.ಬಸವಲಿಂಗಯ್ಯ ಅವರ ಬೂಸಾ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯವನ್ನು ಬೂಸಾ ಸಾಹಿತ್ಯ ಎಂದು ಕರೆದಿರುವುದು ಟೀಕೆಗೊಳಗಾಗಿತ್ತು. ಇದರಿಂದಾಗಿ ಬಂಡಾಯ ಚಳುವಳಿ ಹುಟ್ಟಿಕೊಂಡಿತು.

ಇಂದು ಸಾಂಸ್ಕೃತಿಕ ನಾಯಕರನ್ನಾಗಿ ಅನುಭಾವಿಗಳನ್ನು ಆಯ್ಕೆ ಮಾಡುತ್ತಿದ್ದೇವೆ. ಅನುಭಾವಿ ಎಂದರೆ ಸರ್ವಜ್ಞ ಅಲ್ಲ. ಅದು ನಮ್ಮ ಭ್ರಮೆ.  ಧಾರ್ಮಿಕ ಚಿಂತಕರನ್ನು ಸಾಮಾಜಿಕ ಮತ್ತು ರಾಜಕೀಯ ನೆಲೆಗೆ ತರುವುದು ವಾಸ್ತವವಲ್ಲ. ಅದರಿಂದ ಪರಿಹಾರ ಸಿಗುವುದಿಲ್ಲ. ಅನ್ನ ಮನುಷ್ಯನ ಮೂಲಭೂತ ಅಗತ್ಯ. ಅನುಭಾವ ಕಟ್ಟಕಡೆಯ ಅಗತ್ಯ ಎಂದು  ಹೇಳಿದರು.

ಅಪೂರ್ವ ಡಿ ಸಿಲ್ವಾ ಅವರು ಮಾತನಾಡಿ, ಜನಪದದಲ್ಲಿ ಮಂಟೇಸ್ವಾಮಿಯನ್ನು ಅಲ್ಲಮ ಎಂದು ಕರೆಯುತ್ತಾರೆ.  ಎಲ್ಲಾ ರೀತಿಯ ಸಾಹಿತ್ಯ ಚಿಂತನೆಗಳು ಅಲ್ಲಮನ ವಚನಗಳಲ್ಲಿ ದೊರೆಯುತ್ತವೆ. ಆದ್ದರಿಂದ ಅಲ್ಲಮನನ್ನು ಅನುಭಾವದ ನೆಲೆಯಲ್ಲಿ ನೋಡಲು ಸಾಧ್ಯವಿಲ್ಲ. ಅಲ್ಲಮನ ವಚನ ಮತ್ತು ಬುದ್ಧನ ವಿಚಾರಗಳಿಗೆ ಸಾಮಿಪ್ಯತೆ ಇದೆ ಎಂದು ಅಲ್ಲಮನ ವಿಚಾರಧಾರೆಗಳ ಕುರಿತಂತೆ ಪ್ರತಿಕ್ರಿಯಿಸಿದರು.

ಚಿನ್ನಸ್ವಾಮಿ ಒಡ್ಡಗೆರೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಅಲ್ಲಮ ಜ್ಞಾನ  ಪರಂಪರೆಯ ಗುರು. ವಚನ ಸಾಹಿತ್ಯದ ಅನುಭವ ಮಂಟಪಕ್ಕೆ ಜ್ಞಾನದ ಪ್ರಭೆ ತಂದವರು. ಅಲ್ಲಮನ ಚಿಂತನೆಗಳು ವರ್ತಮಾನದ ತಲ್ಲಣಗಳ ಜೊತೆ ಅನುಭಾವಿ ಸಾಹಿತ್ಯದಲ್ಲಿ ಹೆಣೆದುಕೊಂಡಿವೆ ಎಂದು ಅಲ್ಲಮಪ್ರಭುವಿನ ಸಾಹಿತ್ಯ ಚಿಂತನೆಯ ಬಗ್ಗೆ ಹೇಳಿದರು.

ಈ ಸಂದರ್ಭದಲ್ಲಿ ರವಿಚಂದ್ರ ಚಿಕ್ಕೆಂಪಿಹುಂಡಿ, ಆರ್ ಮಂಜುನಾಥ್, ದೇವನಾಗ್ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: