ಸುದ್ದಿ ಸಂಕ್ಷಿಪ್ತ

ಸರ್ಕಾರಿ ಜಾಹೀರಾತು/ಟೆಂಡರ್ ವಾರ್ತಾ ಇಲಾಖೆ ಮೂಲಕವೇ ಬಿಡುಗಡೆ ಮಾಡಿ: ವಿಶುಕುಮಾರ್

ಮಡಿಕೇರಿ ಜು.19: ಜಾಹೀರಾತು ನೀತಿ 2013ರ ಪ್ರಕಾರ ಸರ್ಕಾರದ ಎಲ್ಲಾ ಇಲಾಖೆಗಳ ಹಾಗೂ ನಿಗಮ, ಮಂಡಳಿಗಳು, ಪ್ರಾಧಿಕಾರಗಳು ಮತ್ತು ಸರ್ಕಾರದ ಅಧೀನಕ್ಕೊಳಪಡುವ ಸಂಸ್ಥೆಗಳ ಜಾಹೀರಾತು/ಟೆಂಡರ್‍ಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕವೇ ಬಿಡುಗಡೆ ಮಾಡಬೇಕಾಗಿದೆ. ಆದ್ದರಿಂದ ಎಲ್ಲಾ ಸರ್ಕಾರಿ ಇಲಾಖೆಗಳು ಜಿಲ್ಲಾ ಕಚೇರಿಗಳ ಜಾಹೀರಾತುಗಳನ್ನು ಆಯಾ ವ್ಯಾಪ್ತಿಯ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯ ಮೂಲಕವೇ ಬಿಡುಗಡೆ ಮಾಡುವಂತೆ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯಿಂದ ಬಿಡುಗಡೆ ಮಾಡಲಾಗುತ್ತಿರುವ ವಿವಿಧ ಇಲಾಖೆಗಳ ಕಾಮಗಾರಿಗಳ ಟೆಂಡರ್ ಹಾಗೂ ವರ್ಗೀಕೃತ ಜಾಹೀರಾತುಗಳನ್ನು ಇನ್ನು ಮುಂದೆ ಆಯಾ ಜಿಲ್ಲೆಗಳ ಜಿಲ್ಲಾ ಕಚೇರಿಯಿಂದ ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ. ಜಿಲ್ಲಾ ವ್ಯಾಪ್ತಿಯ ವಿವಿಧ ಕಚೇರಿಗಳ ಟೆಂಡರ್/ಜಾಹೀರಾತುಗಳನ್ನು ಆಯಾ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯ ಮೂಲಕ ಹೊಸ ಜಾಹೀರಾತು ನೀತಿ ಹಾಗೂ ತಿದ್ದುಪಡಿ ಆದೇಶಗಳ ನಿಯಮಾವಳಿಗಳ ಅನ್ವಯ ಬಿಡುಗಡೆ ಮಾಡುವಂತೆ ಈ ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರದ ಇಲಾಖೆಗಳ ಅಧೀನದಲ್ಲಿ ಬರುವ ಎಲ್ಲಾ ನಿಗಮ ಮಂಡಳಿ, ಪ್ರಾಧಿಕಾರ, ಜಿಲ್ಲಾ ಪಂಚಾಯತ್ ಹಾಗೂ ಸ್ಥಳಿಯ ಸಂಸ್ಥೆಗಳಿಗೆ ಸಂಬಂಧಿಸಿದ ಕಾಮಗಾರಿಗಳ ಟೆಂಡರ್/ಜಾಹೀರಾತುಗಳ ವೆಚ್ಚವನ್ನು ಸಂಬಂಧ ಪಟ್ಟ ಸಂಸ್ಥೆಗಳೇ ಪಾವತಿಸಬೇಕು. ಇದಕ್ಕೆ ಅನುವಾಗುವಂತೆ ಬಿಲ್ಲುಗಳನ್ನು ದೃಢೀಕರಿಸಿ ಸಂಬಂಧಿಸಿದ ಕಚೇರಿಗಳಿಗೆ ಕಳುಹಿಸಿಕೊಡಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಇಲಾಖೆಗಳು  ಹಾಗೂ ನಿಗಮ, ಮಂಡಳಿಗಳು ವಾರ್ತಾ ಇಲಾಖೆ  ಮೂಲಕವೇ ಜಾಹೀರಾತುಗಳನ್ನು ಸರ್ಕಾರದ ಆದೇಶಕ್ಕೆ ಅನುಸಾರ ಕಡ್ಡಾಯವಾಗಿ ಬಿಡುಗಡೆ  ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: