ಮೈಸೂರು

ರಾಜಕೀಯ ಜೀವನದಲ್ಲಿ ಏಳು-ಬೀಳು ಕಂಡಿರುವೆ: ಮಾಜಿ ಸಚಿವ ಶ್ರೀನಿವಾಸ ಪ್ರಸಾದ್

ರಾಜಕೀಯ ಜೀವನದಲ್ಲಿ ಸಹಜವಾಗಿ ಹಲವಾರು ಏಳು-ಬೀಳು, ಸೋಲು-ಗೆಲುವುಗಳನ್ನು ಕಂಡಿರುವೆ. ನನ್ನ ರಾಜಕೀಯ ಹಾಗೂ ವೈಯುಕ್ತಿಕ ಬದುಕಿನಲ್ಲಿ ಕಳಂಕವೆಸಗದೆ, ಭ್ರಷ್ಟಾಚಾರವನ್ನು ಹತ್ತಿರಕ್ಕೂ ಸುಳಿಯದಂತೆ ಪ್ರಾಮಾಣಿಕವಾಗಿ ಘನತೆ ಗೌರವದಿಂದ ಬದುಕು ಸಾಗಿಸಿದ್ದೇನೆ ಎಂದು ಮಾಜಿ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.

ಅವರು ನಗರ ಮೌರ್ಯ ರೆಸಿಡೆನ್ಸಿ ಹೋಟೆಲ್ ನಲ್ಲಿ ಭಾನುವಾರ ‘ಮೈತ್ರಿ’ ಬುದ್ಧಿಮಾಂದ್ಯ ಶಾಲೆಯಿಂದ ಆಯೋಜಿಸಿದ ‘ಮೈತ್ರಿ ಸ್ವರ್ಶ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಸಕನಾಗಿ ಇದು ನನ್ನ ಕೊನೆಯ ಕಾರ್ಯಕ್ರಮವಾಗಿದ್ದು ಅ.17ರ ಸೋಮವಾರದಂದು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ.

28ರ ಹರೆಯದಲ್ಲಿಯೇ ಸಂಸದನಾಗಿ ಅತಿ ಚಿಕ್ಕ ಪ್ರಾಯದ ಸಂಸದನ್ನೆನುವ ಕೀರ್ತಿಗೆ ಪಾತ್ರನಾಗಿದ್ದೆ. ರಾಜಕೀಯದಲ್ಲಿ ಶುದ್ಧ ಹಸ್ತನಾಗಿ ಪ್ರಾಮಾಣಿಕತೆ ನಿಸ್ವಾರ್ಥತೆಯಿಂದ ಜನರ ಹಾಗೂ ಕ್ಷೇತ್ರದ ಸೇವೆ ಸಲ್ಲಿಸಿರುವೆ. ವಿದ್ಯಾರ್ಥಿ ದಿಸೆಯಿಂದಲೂ ವೆಂಕಣ್ಣ ಮೇಸ್ಟ್ರೋಂದಿಗೆ ಒಡನಾಡ ಹೋದಿದ್ದೆ. ಅವರ ಮಾರ್ಗದರ್ಶನ ತತ್ವಾರ್ದಶಗಳು ಜೀವನ ರೂಪಿಸಲು ನೆರವಾಯಿತು. ಶಾಸಕನಾಗಿ ಇದು ನನ್ನ ಕೊನೆಯ ಕಾರ್ಯಕ್ರಮ ಎಂದು ಭಾವುಕರಾದರು.

ಸರ್ಕಾರದ ಯಾವುದೇ ಅನುದಾನವು ಶಾಲೆಗೆ ಇಲ್ಲದಿರುವುದು ಖಂಡನೀಯ. ಮೈತ್ರಿ ಬುದ್ಧಿಮಾಂದ್ಯ ಶಾಲೆಗೆ 25 ಸಾವಿರ ರೂಪಾಯಿ ಚೆಕ್ ವಿತರಿಸಿ ಸಂಸದನ ಪಿಂಚಣಿಯಲ್ಲಿ ಪ್ರತಿ ತಿಂಗಳು 5 ಸಾವಿರ ರೂ.ಗಳನ್ನು ಶಾಲೆಗೆ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಮೈತ್ರಿ ಬುದ್ಧಿಮಾಂದ್ಯ ಶಾಲೆಯ ಸಂಸ್ಥಾಪಕ ಪ್ರೊ. ಎನ್. ವೆಂಕೋಬರಾವ್, ಅಧ್ಯಕ್ಷ ರವೀಂದ್ರ ಜೋಶಿ, ಖಜಾಂಚಿ ಡಾ. ಅನಿಲ್ ಕುಮಾರ್, ಚನ್ನಕೇಶವ, ಲಯನ್ಸ್ ಐಕಾನ್ ಅಧ್ಯಕ್ಷೆ ರಶ್ಮಿ ಜೋಶಿ ಮುಂತಾದವರು ಉಪಸ್ಥಿತರಿದ್ದರು.

Leave a Reply

comments

Related Articles

error: