ಕರ್ನಾಟಕಮೈಸೂರು

ತಲ ಕಾವೇರಿಯಲ್ಲಿ ತೀರ್ಥೋದ್ಭವ : ಭಕ್ತರಲ್ಲಿ ಧನ್ಯತಾಭಾವ

talacauvery-web-1ಸುತ್ತಲೂ ಮಂಜು ಕವಿದಿತ್ತು. ಆಗತಾನೆ ಭಾಸ್ಕರ ತನ್ನ ಕಿರಣಗಳ ಪ್ರಭೆಯನ್ನುಪ್ರಕೃತಿಯ ಮೇಲೆ ಚೆಲ್ಲತೊಡಗಿದ್ದ. ಅದೇ ವೇಳೆ ಅಲ್ಲಿ ನೆರೆದಿದ್ದ ಸಾವಿರಾರು ಭಕ್ತಾದಿಗಳಲ್ಲಿ ಪುನೀತರಾಗಿ ಜನ್ಮ ಸಾರ್ಥಕವಾಯಿತು ಎಂಬ ಧನ್ಯತಾ ಭಾವ ಮೈ ತಳೆದಿತ್ತು.ಇವೆಲ್ಲ ನಡೆದಿದ್ದು ಕೊಡಗಿನ ತಲಕಾವೇರಿಯಲ್ಲಿ. ಯಾಕೆಂದರೆ ಸೋಮವಾರ ತುಲಾಸಂಕ್ರಮಣದ ತೀರ್ಥೋದ್ಭವ

ಸೋಮವಾರ ಬೆಳಿಗ್ಗೆ 6.28ಕ್ಕೆ ತುಲಾ ಲಗ್ನದಲ್ಲಿ ಕನ್ನಡ ನಾಡಿನ ಜೀವನದಿ ಕಾವೇರಿಯ ತೀರ್ಥೋದ್ಭವವಾಯಿತು. ಸಾವಿರಾರು ಭಕ್ತರು ತೀರ್ಥೋದ್ಭವವನ್ನು ಕಣ್ತುಂಬಿಕೊಂಡರಲ್ಲದೇ ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು. ಅದಕ್ಕಾಗಿ ಕೊಡಗು ಜಿಲ್ಲಾಡಳಿತವು ಸೂಕ್ತ ಭದ್ರತೆಯನ್ನು ಏರ್ಪಡಿಸಿತ್ತು.

ಕೊಡಗು ಜಿಲ್ಲಾಧಿಕಾರಿ ರಿಚಾರ್ಡ್ ವಿನ್ಸೆಂಟ್ ಡಿಸೋಜಾ ಮಾತನಾಡಿ ಕ್ಷೇತ್ರದಲ್ಲಿ ಭದ್ರತೆಗಾಗಿ ಜಿಲ್ಲಾಡಳಿತವು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು  ಹೇಳಿದರು. ತುಲಾ ಸಂಕ್ರಮಣ ಪರ್ವ ಕಾಲದಲ್ಲಿ ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳ ಕಾಲ ನಿರಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಸಹಾಯಕ ಆಯುಕ್ತರು ತಿಳಿಸಿದರು.

ಭದ್ರತೆಯ ದೃಷ್ಟಿಯಿಂದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಐನೂರು ಪೊಲೀಸ್ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಿದ್ದಾರೆ. 15ಮಂದಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್, 25ಮಂದಿ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಗಳನ್ನು ನಿಯೋಜಿಸಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಯಿಸಿಕೊಳ್ಳಲಾಗಿದೆ.  ದೇವಸ್ಥಾನದ ಸುತ್ತಮುತ್ತ 35 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಮಂಡ್ಯದ ಮಾಜಿ ಸಂಸದೆ ರಮ್ಯಾ, ಶಾಸಕ ಅಪ್ಪಚ್ಚು ರಂಜನ್, ಸುನಿಲ್ ಸುಬ್ರಹ್ಮಣ್ಯ, ವೀಣಾ ಅಚ್ಚಯ್ಯ, ಮಂಡ್ಯ ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಗೌಡ,ಶ್ರೀಕಂಠೇ ಗೌಡ ಮತ್ತಿತರರು ಉಪಸ್ಥಿತರಿದ್ದರು. ಗೋಪಾಲಕೃಷ್ಣಾಚಾರ್ ನೇತೃತ್ವದಲ್ಲಿ 18ಮಂದಿ ಪುರೋಹಿತರು ಪೂಜಾ ವಿಧಿವಿಧಾನ ನೆರವೇರಿಸಿದರು.

ಅಕ್ಟೋಬರ್ ತಿಂಗಳ ಮಧ್ಯದಲ್ಲಿ ತುಲಾಮಾಸದ ಮೊದಲನೆಯ ದಿನ ತೀರ್ಥೋದ್ಭವವಾಗಲಿದ್ದು, ಕಾವೇರಿ ತಾಯಿ ದರ್ಶನ  ನೀಡಿ ನಮ್ಮೆಲ್ಲರನ್ನು ಪೊರೆಯುತ್ತಾಳೆ ಎನ್ನುವುದು ಇಲ್ಲಿನ ಜನರ ನಂಬಿಕೆ. ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ರಾಜ್ಯ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ.

ತೀರ್ಥೋದ್ಭವದಲ್ಲಿ ಉಗಮವಾದ ನೀರನ್ನು ಭಕ್ತರು ತೀರ್ಥವೆಂದು ಬಾಟಲಿಗಳಲ್ಲಿ ತುಂಬಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ.

Leave a Reply

comments

Related Articles

error: