ಮೈಸೂರು

ಕೊನೆಯ ಆಷಾಢ ಶುಕ್ರವಾರ: ದೇವಿಯ ದರ್ಶನಕ್ಕೆ ಹೊರ ರಾಜ್ಯಗಳಿಂದಲೂ ಆಗಮಿಸಿದ ಭಕ್ತರು

ಮೈಸೂರು,ಜು.21:- ಮೈಸೂರಿನ ಪ್ರಖ್ಯಾತ ದೇವಾಲಯ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಕೊನೆಯ ಆಷಾಢ ಶುಕ್ರವಾರವಾಗಿದ್ದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ. ತಾಯಿ ಚಾಮುಂಡೇಶ್ವರಿ ಸರ್ವಾಲಂಕಾರ ಭೂಷಿತೆಯಾಗಿ, ಭಕ್ತವರಪ್ರದಾಯಕಳಾಗಿ ಕಂಗೊಳಿಸುತ್ತಿದ್ದಳು.

ಬೆಳಗಿನ ಜಾವದಿಂದಲೇ ತಾಯಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಪಂಚರತ್ನ ಎಂಟರ್ ಪ್ರೈಸಸ್ ವತಿಯಿಂದ ಅನ್ನದಾಸೋಹ ಮತ್ತು ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಿಸಿದ್ದಾರೆ. ದೇವಾಲಯಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಬಾರಿ ತುಂಬಾ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದಾರೆ. ಹೊರರಾಜ್ಯಗಳಿಂದಲೂ ಆಗಮಿಸಿದ್ದಾರೆ. ಸುಮಾರು ಒಂದು ಕೋಟಿ ದೇವಳಕ್ಕೆ ಸಂಗ್ರಹವಾಗುವ ನಿರೀಕ್ಷೆಯಿದೆ. ಬಂದ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಹೆಚ್ಚಿನ ಸೌಲಭ್ಯ ನೀಡಲು ಬಯಸುತ್ತಿದ್ದೇವೆ. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿ, ಎಲ್ಲರೂ ಕ್ಷೇಮದಿಂದಿರಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತೇನೆ. ಇವತ್ತು ನನ್ನ ಮಗಳ ಜನ್ಮದಿನವೂ ಆಗಿರುವುದರಿಂದ ತಾಯಿಯ ದರ್ಶನಕ್ಕೆ ಕುಟುಂಬ ಸಮೇತನಾಗಿ ಬಂದಿದ್ದೇನೆ ಎಂದರು.

ತಾಯಿಯ ದರ್ಶನಕ್ಕೆ ಸಾಗರ ರೀತಿಯಲ್ಲಿ ಹರಿದು ಬಂದ ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: