ದೇಶಪ್ರಮುಖ ಸುದ್ದಿ

ಕಾಶ್ಮೀರ ವಿವಾದ ಬಗೆಹರಿಸಲು ಚೀನಾ-ಅಮೆರಿಕದ ನೆರವು ಪಡೆಯಬೇಕು: ಫರೂಖ್ ಅಬ್ದುಲ್ಲಾ

ನವದೆಹಲಿ, ಜುಲೈ 21 : ಜಮ್ಮು ಮತ್ತು ಕಾಶ್ಮೀರ ವಿವಾದ ಬಗೆಹರಿಸಲು ಭಾರತವು ಚೀನಾ ಮತ್ತು ಅಮೆರಿಕದಂತಹ ರಾಷ್ಟ್ರಗಳ ನೆರವು ಪಡೆಯಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ ಅವರು ಹೇಳಿದ್ದಾರೆ.

ವಿವಾದ ಕುರಿತಂತೆ ಗುರುವಾರ ಮಾತನಾಡಿರುವ ಫರೂಖ್ ಅವರು, ವಿಶ್ವದ ಹಲವು ರಾಷ್ಟ್ರಗಳೊಂದಿಗೆ ಭಾರತ ಸ್ನೇಹಮಯೀ ಸಂಬಂಧವನ್ನು ಹೊಂದಿದೆ. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವಂತೆ ಚೀನಾ ಹಾಗೂ ಅಮೆರಿಕದಂತಹ ರಾಷ್ಟ್ರಗಳಿಗೆ ಮನವಿ ಮಾಡುವುದು ಒಳಿತು ಎಂದು ಹೇಳಿದ್ದಾರೆ.

ಕೆಲವೊಮ್ಮೆ ಕೊಂಬುಗಳನ್ನು ಹಿಡಿದೇ ಗೂಳಿಗಳನ್ನು ಎಳೆಯಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದ ಫರೂಖ್ ಅಬ್ದುಲ್ಲಾ ಅವರು, ವಿಶ್ವದ ಪ್ರಬಲ ಶಕ್ತಿಗಳೊಂದಿಗೆ ಭಾರತ ಮಿತೃತ್ವ ಹೊಂದಿದೆ. ಅಂತಹ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ ಕಾಶ್ಮೀರ ವಿವಾದ ಸಂಬಂಧ ಮಧ್ಯಸ್ಥಿಕೆ ವಹಿಸುವಂತೆ ಭಾರತ ಮನವಿ ಮಾಡಬಹುದು. ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಕಾಶ್ಮೀರ ಸಮಸ್ಯೆ ಬಗೆಹರಿಯಬೇಕೆಂದು ಹೇಳಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಚೀನಾ ಕೂಡ ಸಿದ್ಧವಿದ್ದೇವೆಂದು ಹೇಳಿದೆ. ಕಾಶ್ಮೀರ ಸಮಸ್ಯೆ ಬಗೆಹರಿಸಲು ಇನ್ನೆಷ್ಟು ಕಾಲ ಕಾಯಬೇಕು ಎಂದು ಅಸಮಾಧಾನದಿಂದಲೇ ಪ್ರಶ್ನಿಸಿದರು.

ಮಾತುಕತೆಯಿಂದ ಯುದ್ಧ ತಡೆಯಬಹುದು :

ಭಾರತವು ಚೀನಾದೊಂದಿಗೆ ಮಾತುಕತೆ ನಡೆಸಿದರೆ ಯುದ್ಧವನ್ನು ತಡೆಯಬಹುದು. ಚೀನಾ ಈಗಾಗಲೇ ಕಾಶ್ಮೀರ ವಿವಾದ ಬಗೆಹರಿಸಲು ಆಸಕ್ತಿ ಹೊಂದಿರುವುದಾಗಿ ಹೇಳಿದೆ. ಭಾರತ ಈ ನಿಟ್ಟಿನಲ್ಲಿ ಮುಂದುವರಿದು ಚೀನಾ-ಅಮೆರಿಕ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಫರೂಕ್ ಅವರು, “ಸ್ನೇಹಿತರು ಬದಲಾಗಬಹುದು. ಆದರೆ, ನೆರೆಯವರು ಬದಲಾಗುವುದಿಲ್ಲ” ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಹಿಂದೆಯೇ ಹೇಳಿದ್ದಾರೆ. ಮೊಂಡುತನದಿಂದ ಯಾವುದೇ ರಾಷ್ಟ್ರವನ್ನು ಪ್ರಗತಿಯೆಡೆಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಮಿತ್ರತ್ವವನ್ನು ಮುಂದುವರೆಸಬೇಕಾದರೆ ಒಬ್ಬರಾದರೂ ಮುಂದಕ್ಕೆ ಹೆಜ್ಜೆ ಇಡಬೇಕು. ಇಲ್ಲವೇ, ಶತ್ರುಗಳಾಗುವ ಮೂಲಕ ಅವರನ್ನು ಹಿಮ್ಮೆಟ್ಟಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

ಕಾಶ್ಮೀರದಲ್ಲಿ ಶಾಲೆಯ ಮೇಲೆ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಫರೂಕ್ ಅವರು, ಮುಂದಿನ ಪೀಳಿಗೆಯನ್ನು ಗುರಿ ಮಾಡಿ ದಾಳಿ ನಡೆಯುತ್ತಿದೆ. ಹೀಗಾಗದೆ ಮುಂದೆ ದೇಶ ನಡೆಯುವುದಾದರೂ ಹೇಗೆ? ಕಾಶ್ಮೀರದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಪ್ರತಿದಿನ ಸಾವುನೋವು ಸಂಭವಿಸುತ್ತಿವೆ. ದುಷ್ಕರ್ಮಿಗಳನ್ನು ಮಟ್ಟ ಹಾಕುವಂತೆ ಸರ್ಕಾರಕ್ಕೆ ಈ ಸಂದರ್ಭ ಆಗ್ರಹಿಸುತ್ತೇನೆ ಎಂದು ಅವರು ತಿಳಿಸಿದರು.

-ಎನ್.ಬಿ.

Leave a Reply

comments

Related Articles

error: