ಕರ್ನಾಟಕ

ಆರೋಗ್ಯದ ಹಿತದೃಷ್ಠಿಯಿಂದ ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ : ಜೆ.ಪ್ರೇಮಕುಮಾರಿ

ರಾಜ್ಯ(ಮಂಡ್ಯ) ಜು.21:- ಕೆ.ಆರ್.ಪೇಟೆ  ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಡೆಂಗ್ಯೂ ಮತ್ತು ಚಿಕೂನ್‍ಗುನ್ಯಾ ಜ್ವರ ಹರಡುವ ಕುರಿತು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಜನಜಾಗೃತಿ ಜಾಥಾ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪ್ರೇಮಕುಮಾರಿ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನೀರಿನಿಂದ ಸುಲಭವಾಗಿ ಹರಡುವ ಡೆಂಗ್ಯೂ, ಮಲೇರಿಯಾ, ಚಿಕೂನ್‍ಗುನ್ಯಾ ಮತ್ತಿತರ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಗ್ರಾಮೀಣ ಜನತೆ ಅರಿವು ಪಡೆದುಕೊಳ್ಳಬೇಕು. ಕುಡಿಯಲು ಶುದ್ಧ ಕುದಿಸಿ ಆರಿಸಿದ ನೀರು ಉಪಯೋಗಿಸಬೇಕು. ಮನೆಗಳ ಸುತ್ತಮುತ್ತ ತೆಂಗಿನ ಚಿಪ್ಪುಗಳಲ್ಲಿ, ಹಳೆಯ ಟೈರುಗಳಲ್ಲಿ, ಪ್ಲಾಸ್ಟಿಕ್ ಲೋಟ, ಕವರ್‍ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಡೆಂಗ್ಯೂ ಬಾರದಂತೆ ಕ್ರಮ ವಹಿಸಬೇಕು. ಗ್ರಾಮಸ್ಥರು ಎಲ್ಲರೂ ತಮ್ಮ ತಮ್ಮ ಮನೆ ಬಳಿಯ ಚರಂಡಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಲ್ಲವನ್ನು ಗ್ರಾಮ ಪಂಚಾಯಿತಿಯವರೇ ಮಾಡಲಿ ಎಂಬ ಉದಾಸೀನತೆ ತೋರಬಾರದು. ತಮ್ಮ ಆರೋಗ್ಯದ ಹಿತದೃಷ್ಠಿಯಿಂದ ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು  ಸಲಹೆ ನೀಡಿದರು.
ಈ ಸಂದರ್ಭ ಮಾರೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಜೆ.ಅಜಿತ್, ನಿವೃತ್ತ ವೈದ್ಯಾಧಿಕಾರಿ ಡಾ.ರಂಗಪ್ಪ, ಶಾಲಾ ಮುಖ್ಯ ಶಿಕ್ಷಕ ಶಿವರಾಮೇಗೌಡ, ಆರೋಗ್ಯ ಸಹಾಯಕರಾದ ವೆಂಕಟೇಶ್, ಜೆ.ಆರ್.ನವೀನ್, ಸೇರಿದಂತೆ ಗ್ರಾಮದ ಮುಖಂಡರು  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: