ಮೈಸೂರು

ಸರ್ಜಿಕಲ್ ದಾಳಿ ಕುರಿತು ಪ್ರಶ್ನಿಸುವವರು ದೇಶದ್ರೋಹಿಗಳು: ಮುತಾಲಿಕ್ ಆರೋಪ

ಪಾಕಿಸ್ತಾನದ ಮೇಲೆ ನಡೆದ ಸರ್ಜಿಕಲ್ ದಾಳಿಯ ಕುರಿತು ಸಾಕ್ಷಿ ಕೇಳುತ್ತಿರುವ ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ ಅವರು  ದೇಶದ್ರೋಹಿಗಳು ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಮೈಸೂರು ರಕ್ಷಣಾ ವೇದಿಕೆಯ ವತಿಯಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಆಯೋಜಿಸಿದ್ದ ‘ಕಾಶ್ಮೀರದ ಸಮಸ್ಯೆ ಭಾರತದ ಸಮಸ್ಯೆ ಹೇಗೆ?’ ಕುರಿತಾದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಮುತಾಲಿಕ್ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಕಾಶ್ಮೀರದಲ್ಲಿ ನಿರಂತರ ತೊಂದರೆ ನೀಡುತ್ತಿರುವ ಸಂದರ್ಭದಲ್ಲಿ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿದೆ. ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ ಅವರು ದಾಳಿ ನಡೆಸಿರುವ ಕುರಿತು ಸಾಕ್ಷಿ ಕೇಳುತ್ತಿದ್ದಾರೆ. ಸೈನಿಕರಲ್ಲಿ ಉತ್ಸಾಹ ತುಂಬಬೇಕಾದ ಸಮಯದಲ್ಲಿ ಸಾಕ್ಷಿ ಕೇಳುವುದು ಯಾವ ಧರ್ಮ ಎಂದು ಪ್ರಶ್ನಿಸಿದರು.

ಪಾಕಿಸ್ತಾನದಲ್ಲಿ  ಪ್ರಜಾಪ್ರಭುತ್ವ ಇಲ್ಲ. ಪಾಕಿಸ್ತಾನವನ್ನು 50 ವರ್ಷಗಳಿಂದ ಸಹನೆಯಿಂದ ಸಹಿಸಿಕೊಂಡಿರುವುದೇ ತಪ್ಪಾಗಿದೆ. ನಮ್ಮ ಸೈನಿಕರು ಸರ್ಜಿಕಲ್ ದಾಳಿಯ ಮೂಲಕ ಭಯೋತ್ಪಾದಕರಿಗೆ ದಿಟ್ಟ ಉತ್ತರ ನೀಡುವ ಯತ್ನ ಮಾಡಿದ್ದಾರೆ. ಕಾಶ್ಮೀರ ಸಮಸ್ಯೆ ಕೇವಲ ಅಲ್ಲಿನ ಸಮಸ್ಯೆ ಅಲ್ಲ. ಅದು ಇಡೀ ದೇಶದ ಸಮಸ್ಯೆ ಆಗಿದೆ ಎಂದು ಹೇಳಿದರು.

ಜಮ್ಮುವಿನ ಪನೂನ್ ಕಾಶ್ಮೀರ ಸಂಘಟನೆ ಮುಖಂಡ ಓಪೇಂದ್ರ ಕೆ. ಬಾಲಿ  ಮಾತನಾಡಿ ಜಮ್ಮು ಕಾಶ್ಮೀರದಲ್ಲಿ ಹಿಂದೂ ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲಿ ಬಹಿರಂಗವಾಗಿ ನಾನು ಹಿಂದೂ ಎಂದು ಹೇಳಿಕೊಂಡು ಬದುಕುವ ಧೈರ್ಯವೂ ನಮಗಿಲ್ಲದಾಗಿದೆ ಎಂದು ಹಿಂದೂಗಳ ನಿಜಸ್ಥಿತಿಯನ್ನು ತೆರೆದಿಟ್ಟರು. ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ಜಮ್ಮು-ಕಾಶ್ಮೀರ ಭಾರತದ ಭಾಗವಾಯಿತು. ಆದರೆ, ನಮ್ಮ ರಾಜಕಾರಣಿಗಳ ಅವಿವೇಕಿತನ ಮತ್ತು ಸ್ವಾರ್ಥದಿಂದ ಮತ್ತು ಪಾಕಿಸ್ತಾನದ ಕುತಂತ್ರದಿಂದ ಕಾಶ್ಮೀರ ಸಮಸ್ಯೆ ಕಳೆದ 70 ವರ್ಷಗಳಿಂದ ಜೀವಂತವಾಗಿದೆ. ಭಾರತದ ಆರ್ಥಿಕತೆಗೆ ಪೆಟ್ಟು ನೀಡುವುದು ಪಾಕಿಸ್ತಾನದ ಅಲಿಖಿತ  ಅಜೆಂಡವಾಗಿದೆ. ಇದರ ವಿರುದ್ಧ ಪ್ರತಿಯೊಬ್ಬ ಭಾರತೀಯನು ಎಚ್ಚೆತ್ತುಕೊಂಡು ಉತ್ತರ ಕೊಡುವ ಕಾಲ ಹತ್ತಿರವಾಗಿದೆ ಎಂದರು.

ವೇದಿಕೆಯಲ್ಲಿ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ನ.ಪ್ರೇಮ್ ಕುಮಾರ್, ಪತ್ರಕರ್ತ ಮಹೇಶ್ವರನ್   ಉಪಸ್ಥಿತರಿದ್ದರು.

 

Leave a Reply

comments

Related Articles

error: