ಪ್ರಮುಖ ಸುದ್ದಿಮೈಸೂರು

ನಕಲಿ ಅಂಕಪಟ್ಟಿಗಳ ಮಾರಾಟ ಜಾಲ ಪತ್ತೆ : ಮಹಿಳೆಯ ಬಂಧನ

ಮೈಸೂರು,ಜು.22:- ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಕಲಿ ಅಂಕಪಟ್ಟಿಗಳ ಮಾರಾಟ ಜಾಲ ಬೆಳಕಿಗೆ ಬಂದಿದೆ. ಮೈಸೂರು ಸಿಸಿಬಿ ಪೊಲೀಸರು ಖತರ್ನಾಕ್ ಮಹಿಳೆಯೋರ್ವರನ್ನು ಬಂಧಿಸಿದಾಗ ನಕಲಿ ಅಂಕಪಟ್ಟಿ ಮಾರಾಟ ಜಾಲದ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತಳನ್ನು ಮೈಸೂರಿನ ಗೋಕುಲಂ ಬಡಾವಣೆ ನಿವಾಸಿ ಯಶಸ್ವಿನಿ (45) ಎಂದು ಗುರುತಿಸಲಾಗಿದೆ. ಮೈಸೂರಿನ ನಜರ್ ಬಾದ್ ನಲ್ಲಿರುವ ಮಿನಿ ವಿಧಾನಸೌಧದ ಸಮೀಪ ಕಾರಿನಲ್ಲಿ ಕುಳಿತಿದ್ದ ಯಶಸ್ವಿನಿ ಪೊಲೀಸ್ ಗಸ್ತು ವಾಹನವನ್ನು ಕಂಡಾಕ್ಷಣ ವಿಚಲಿತಗೊಂಡು ಸ್ಥಳದಿಂದ ಪರಾರಿಯಾಗಲು ಯತ್ಸಿದ್ದು, ಈ ವೇಳೆ ಅನುಮಾನಗೊಂಡ ಸಿಸಿಬಿ ಇನ್ಸ್‌ಪೆಕ್ಟರ್ ಚಂದ್ರಕಲಾ ಹಾಗೂ ಇತರ ಸಿಬ್ಬಂದಿ ಯಶಸ್ವಿನಿಯನ್ನು ಹಿಡಿದು ಆಕೆಯ ಬಳಿಯಿದ್ದ ಬ್ಯಾಗನ್ನು ಪರಿಶೀಲಿಸಿದಾಗ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿ.ವಿ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿರುವ ಮುಕ್ತ ವಿ.ವಿ ಗಳ ನೂರಾರು ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ. ಯಶಸ್ವಿನಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಸಿಸಿಬಿ ಪೊಲೀಸರು, ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಯಶಸ್ವಿನಿ ತನ್ನ ಬಳಿಯಿದ್ದ ಅಂಕಪಟ್ಟಿಗಳು ನಕಲಿ ಎಂದು ಒಪ್ಪಿಕೊಂಡಿದ್ದಾಳೆ. ಬೆಳಗಾವಿಯ ಬಸವರಾಜು, ಅರಸೀಕೆರೆಯ ಕಿಶನ್ ಎಂಬುವರು ತನ್ನ ನೆರವಿನಿಂದ ನಕಲಿ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕರಿಗೆ ಮಾರಾಟ ಮಾಡುತ್ತಿದ್ದರೆಂದು ಆಕೆ ತಿಳಿಸಿದ್ದು, ವಿವಿಧ ಪದವಿಗಳ ನಕಲಿ ಅಂಕಪಟ್ಟಿ ಮಾತ್ರವಲ್ಲದೇ ಎಸ್.ಎಸ್.ಎಲ್.ಸಿ, ಪಿಯುಸಿ ಯ ನಕಲಿ ಅಂಕಪಟ್ಟಿಗಳನ್ನು ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಿರುವ ಸಂಗತಿ ಕೂಡ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ನಜರ್ ಬಾದ್ ಠಾಣೆ ಹಾಗೂ ಸಿಸಿಬಿ ಪೊಲೀಸರಿಂದ ತನಿಖೆ ತೀವ್ರಗೊಂಡಿದ್ದು, ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: