ಮೈಸೂರುಸಿಟಿ ವಿಶೇಷ

ಪಿಂಕಿ ಕಣ್ಣು ಪ್ಲೋಟೋಗೆ: ವೈದ್ಯ ಲೋಕದಲ್ಲೊಂದು ಹೊಸ ಪ್ರಯೋಗ

ನೇತ್ರದಾನ ಮಹಾದಾನ ಅಂತಾರೆ. ವರನಟ ಡಾ.ರಾಜಕುಮಾರರೇ ನೇತ್ರದಾನಕ್ಕೆ ಅಂಕಿತ ಹಾಕಿ ಸಾರ್ಥಕತೆ ಮೆರೆದಿದ್ದಾರೆ. ಇದರಿಂದ ಇವತ್ತು ಸಾವಿರಾರು ಜನರು ನೇತ್ರದಾನ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಆದರೆ ಇಂತಹ ನೇತ್ರದಾನ ಪ್ರಾಣಿಗಳಿಗೂ ನಡೆದರೆ. ಅರೆ ಇದೇನಪ್ಪ ಅನ್ಕೋಬೇಡಿ. ಇಂತಹ ಅಪರೂಪದ ಘಟನೆ ನಡೆದಿರೋದು ಅರಮನೆ ನಗರಿ ಮೈಸೂರಿನಲ್ಲಿ. ಮೈಸೂರಿನ ಇಬ್ಬರು ಪ್ರಾಣಿಪ್ರಿಯರು ಶುದ್ಧಮನಸ್ಸಿನಿಂದ ಶ್ವಾನವೊಂದಕ್ಕೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿ, ಅನಾರೋಗ್ಯದಿಂದ ಮೃತಪಟ್ಟ ನಾಯಿಯ ಕಣ್ಣನ್ನ ಮತ್ತೊಂದು ನಾಯಿಗೆ ಅಳವಡಿಸಿ ಹೊಸ ಪ್ರಯತ್ನಕ್ಕೆ ನಾಂದಿಯಾಡಿದ್ದಾರೆ.

ಮೈಸೂರಿನ ಶ್ರೀರಾಂಪುರದಲ್ಲಿರುವ ಈಶ್ವರ್ ರಾವ್ ಕುಟುಂಬದಲ್ಲಿ ಕಳೆದ 25 ವರ್ಷಗಳಿಂದ ಪ್ರಾಣಿಪ್ರೀತಿ ಮೆರೆಯುತ್ತಿದ್ದಾರೆ. ಅಲ್ಲದೆ ಈ ಕುಟುಂಬ ಹಲವು ಜಾತಿಯ ನಾಯಿಗಳನ್ನು ಸಹ ಪಾಲನೆ ಸಹ ಮಾಡಿದ್ದಾರೆ. ಇದೀಗ ಈಶ್ವರ್ ಮಗ ರಾಘವೇಂದ್ರ ಅವರ ಮನೆಯಲ್ಲಿ ಎರಡು ನಾಯಿಗಳನ್ನ ಪೋಷಣೆ ಮಾಡುತ್ತಿದ್ದಾರೆ. ಪ್ಲೋಟೋ ಮತ್ತು ರಿಂಕೂ ಹೆಸರಿನ ಈ ನಾಯಿಗಳೆಂದರೆ ಇಡೀ ಕುಟುಂಬಕ್ಕೆ ಅಪಾರ ಪ್ರೀತಿ. ತಾವು ಹಸಿದುಕೊಂಡಿದ್ದರೂ ನಾಯಿಗಳಿಗೆ ಊಟ ಹಾಕೋದನ್ನ ಮಾತ್ರ ಮರೆಯೋಲ್ಲ. ಇಷ್ಟು ಪ್ರೀತಿ ತೋರಿಸೋ ಈ ಕುಟುಂಬಕ್ಕೆ ಕಳೆದ 8 ತಿಂಗಳಿನಿಂದ ನೋವೊಂದು ಕಾಡುತ್ತಿತ್ತು. ಅದೇನೆಂದರೆ ಪ್ಲೋಟೋ ಹೆಸರಿನ 11 ತಿಂಗಳ ನಾಯಿಗೆ ಬಲಗಣ್ಣು ಕಾಣದಿರುವುದು. ಇದನ್ನ ಅದೇಷ್ಟೋ ಶ್ವಾನ ವೈದ್ಯರ ಬಳಿ ತೋರಿಸಿದರೂ ಅದಕ್ಕೆ ದೃಷ್ಟಿಭಾಗ್ಯವೇ ಇರಲಿಲ್ಲ. ಕಡೆಗೊಂಡು ದಿನ ಮೈಸೂರಿನ ಕುವೆಂಪುನಗರದಲ್ಲಿರುವ ಖ್ಯಾತ ಪಶುವೈದ್ಯ ಮದನ್ ಅವರನ್ನು ಸಂಪರ್ಕಿಸಿ ನಾಯಿಯ ಸಮಸ್ಯೆ ಹೇಳಿಕೊಂಡರು. ತಕ್ಷಣ ಅದಕ್ಕೊಂದು ಪರಿಹಾರ ಹುಡುಕಿದ ಮದನ್, ಮತ್ತೊಂದು ನಾಯಿಯ ಕಣ್ಣನ್ನ ಈ ನಾಯಿಗೆ ಅಳವಡಿಸವು ಮೂಲಕ ಪ್ರಾಣಿಗಳ ಲೋಕದಲ್ಲಿ ಹೊಸ ಪ್ರಯತ್ನದ ಚಿಂತನೆ ನಡೆಸಿದ್ದು.

ರಾಘವೇಂದ್ರ ಹಾಗೂ ಮದನ್ ಅವರ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದು ಮೈಸೂರಿನ ಯರಗನಹಳ್ಳಿ ನಿವಾಸಿ ಜಯಕೃಷ್ಣ. ವೃತ್ತಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿರುವ ಜಯಕೃಷ್ಣ ಸಹ ಅಪಾರ ಪ್ರಾಣಿ ಪ್ರಿಯ. ಶ್ವಾನಗಳೆಂದರೆ ಜಯಕೃಷ್ಣ ಹಾಗೂ ಮಗ ಸುನಿಲ್‍ಗೆ ಪಂಚಪ್ರಾಣ. ಇವರು ಸಹ ಪಿಂಕಿ ಹೆಸರಿನ ನಾಯಿಯೊಂದನ್ನ ಕಳೆದ 15 ವರ್ಷಗಳಿಂದ ಸಾಕಿದ್ದರು. ನಾಯಿಗಳ ಪೋಷಣೆ ಹೇಗಿತ್ತೇಂದೆಂತೆ ಸಾಮಾನ್ಯವಾಗಿ 10 ರಿಂದ 12 ವರ್ಷ ಬದುಕುವ ನಾಯಿ ಇವರ ಬಳಿ 15 ವರ್ಷ ಬದುಕಿತ್ತು. ವಯೋಸಹಜ ಅನಾರೋಗ್ಯದಿಂದ ಮೃತಪಟ್ಟ ಈ ನಾಯಿಯ ಕಣ್ಣನ್ನು ದಾನ ಮಾಡುತ್ತೀರಾ ಎಂದು ಕೇಳಿದ ವೈದ್ಯ ಮದನ್ ಮನವಿಗೆ ತಂದೆ-ಮಗ ಇಬ್ಬರೂ ಸ್ಪಂದಿಸಿದರು. ನಮ್ಮ ನಾಯಿ ಇನ್ನು ಜೀವಂತವಾಗಿರುವುದೇ ನಮಗೆ ಆನಂದದ ವಿಷಯ. ಹಾಗಾಗಿ ನಾನು ಸ್ವ-ಇಚ್ಛೆಯಿಂದ ಕಣ್ಣು ದಾನ ಮಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ನಾಯಿ ಮೃತಪಟ್ಟ ಅರ್ಧಗಂಟೆಯಲ್ಲೆ ಆಸ್ಪತ್ರೆ ತಲುಪಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿದರು.

ಇನ್ನು ನೇತ್ರ ಬದಲಾವಣೆಯ ಜವಾಬ್ದಾರಿ ಹೊತ್ತವರು ಮೈಸೂರಿನ ಖ್ಯಾತ ವೈದ್ಯ ಮದನ್. ಇವರ ಪ್ರಕಾರ ಹೊಸ ಕಣ್ಣು ಹಾಕಿರುವ ನಾಯಿಗೆ ಇನ್ನೂ ಎರಡು ತಿಂಗಳು ನಿರಂತರ ಚಿಕಿತ್ಸೆ ನೀಡಬೇಕು. ನಂತರ ನಾಯಿಗೆ ಮತ್ತೊಂದು ಸರ್ಜರಿ ಮಾಡಿ ಪರಿಶೀಲನೆ ಮಾಡಬೇಕು. ಇದಾದ ನಂತರವಷ್ಟೆ ನಮ್ಮ ಪ್ರಯತ್ನಕ್ಕೆ ಫಲ ಅನ್ನೋದು ವೈದ್ಯರ ಅಭಿಪ್ರಾಯ. ಆದರೆ ಮನೆಯಲ್ಲಿ ಸಾಕಿದ ಪ್ರಾಣಿಗಳಿಗೆ ಈ ಪರಿಯ ಪ್ರೀತಿ ತೋರಿದ ಮಕ್ಕಳನ್ನು ಕಂಡ ಎರಡು ಕುಟುಂಬದ ಪೋಷಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆ, ಪ್ರಾಣಿಪ್ರಿಯರ ಜಗತ್ತಿನಲ್ಲೇ ಈ ಹೊಸ ಪ್ರಯತ್ನಕ್ಕೆ ಎಲ್ಲರೂ ಶಹಬ್ಬಾಸ್ ಎನ್ನುತ್ತಿದ್ದಾರೆ. ಎರಡು ತಿಂಗಳ ನಂತರ ಈ ಪ್ಲೋಟೋಗೆ ಕಣ್ಣು ಬಂದರೆ ಮೃತ ನಾಯಿಗಳ ಕಣ್ಣನ್ನು ಮತ್ತೊಂದು ಪ್ರೀತಿಪಾತ್ರ  ನಾಯಿಗೆ ಅಳವಡಿಸಿ ಸಾರ್ಥಕತೆಯ ನಿಟ್ಟುಸಿರು ಬಿಡಬಹುದು ಎನ್ನುವ ಹೊಸದೊಂದು ಪರಿಕಲ್ಪನೆ ಚಾಲನೆ ಪಡೆದುಕೊಂಡಿದೆ. ಅದೇನೇ ಇದ್ದರೂ ಈ ಪ್ರಯತ್ನಕ್ಕೆ ಒಂದು ದೊಡ್ಡ ಸಲಾಂ ಹೇಳೋಣ.

-ಸುರೇಶ್ ಎನ್.

Leave a Reply

comments

Related Articles

error: