ಮೈಸೂರು

ಕಪ್ಪು ಹಣ ಹೊರಗೆಡವಲು ನೋಟುಗಳನ್ನು ಅಮಾನ್ಯ ಮಾಡಿದಂತೆ,  ಕಪ್ಪು ರಾಜಕಾರಣಿಗಳನ್ನು ಹೊರಗೆಡವಲು, ಅವರನ್ನೂ ಅಮಾನ್ಯಗೊಳಿಸಿ 

ಮೈಸೂರು,ಜು,22:- ಭಾರತದ  ‘ಸ್ವಚ್ಛತೆ ಇಲ್ಲದ’ ಆರ್ಥಿಕ ಕ್ಷೇತ್ರದಲ್ಲಿ ಇರುವ ಅವ್ಯವಸ್ಥೆಗಳನ್ನು ತೊಡೆದು  ಸುಧಾರಣೆಗಳನ್ನು  ತರುವ ನಿಟ್ಟಿನಲ್ಲಿ ಇಂದಿನ ಸರ್ಕಾರ ಕಪ್ಪು ಹಣವನ್ನು ನಿಷೇಧಿಸಲು ಮತ್ತು ಖೋಟಾ ನೋಟುಗಳನ್ನು ಹೊರಗೆಡವಲು  500 ಮತ್ತು 1000 ಮುಖಬೆಲೆಯ ನೋಟುಗಳನ್ನು  ಅಮಾನ್ಯತೆ ಮಾಡಿರುವುದು ಸರಿಯೇ, ತಪ್ಪೇ, ಎನ್ನುವುದನ್ನು ಮುಂಬರುವ ದಿನಗಳಲ್ಲಿ ಜನರು ತಮ್ಮದೇ ಆದ ತಕ್ಕಡಿಯಲ್ಲಿ ತೂಗಿ ನಿರ್ಣಯವನ್ನು ನೀಡಲಿದ್ದಾರೆ.

ಅಂತೆಯೇ ಭಾರತದ ‘ಸ್ವಚ್ಛತೆ ಇಲ್ಲದ’ ರಾಜಕೀಯ ಕ್ಷೇತ್ರದಲ್ಲಿರುವ  ಅವ್ಯವಸ್ಥೆಗಳನ್ನು ಮತ್ತು ದುರವಸ್ಥೆಗಳನ್ನು ತೊಡೆಯುವ  ಮತ್ತು ಸುಧಾರಣೆಗಳನ್ನು  ತಂದು ಅದರಲ್ಲಿರುವ ಕಪ್ಪು ರಾಜಕಾರಣಿಗಳನ್ನು ನಿಷೇಧಿಸಿ  ರಾಜಕೀಯ ವ್ಯವಸ್ಥೆಯನ್ನು  ಸುವ್ಯವಸ್ಥೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಇಂದಿನ ಸರ್ಕಾರ ಚುನಾವಣಾ ಸುಧಾರಣೆಗಳನ್ನು  ತರುವ ನಿಟ್ಟಿನಲ್ಲಿ, ಕೇಂದ್ರದಲ್ಲಿ ಆಡಳಿತಕ್ಕೆ ಬರುವ  ಪ್ರತೀ ಸರ್ಕಾರಗಳೂ ಏಕೆ ಹಿಂಜರಿಯುತ್ತಿವೆ ಎನ್ನುವುದು ಒಂದು ಯಕ್ಷಪ್ರಶೆಯಾಗಿಯೇ ಉಳಿದಿದೆ. ಸಂಸತ್ತಿಗೆ  ಆಯ್ಕೆಯಾಗಿ ಬಂದ ಸಂಸದರ ಪೈಕಿ ಇಂದು  170+ ಸಂಸದರು  ಅಪರಾಧೀಕರಣಗಳಿಗೆ ಒಳಪಟ್ಟಿರುವ ಮಾಹಿತಿಯಿದೆ.   ಈ ಅಪರಾಧೀಕೃತ ಸಂಸದರು ಜನತೆಯ ಒಳಿತಿಗಾಗಿ ಮಹತ್ತರವಾದ ಮತ್ತು ಗಹನವಾದ ವಿಷಯಗಳಲ್ಲಿ ಎಷ್ಟರ ಮಟ್ಟಿಗೆ ಸರ್ಕಾರಕ್ಕೆ ಸಲಹೆ ಕೊಡುವ ಯೋಗ್ಯತೆ ಇದೆ ಎನ್ನುವುದು ಒಂದು ದುರಂತದ ವಿಷಯ.  ಈ ವ್ಯಕ್ತಿಗಳಿಗೆ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಯಾವ ಅರ್ಹತೆಯನ್ನು ಕಂಡು ಮತ್ತು ಏತಕ್ಕೆ ಅವರಿಗೆ ಅರ್ಹತಾ ಪತ್ರಗಳನ್ನು ನೀಡಿದರು ಎನ್ನುವುದು ಪಾರದರ್ಶಕವಾಗಿಲ್ಲ ಮತ್ತು ಉತ್ತರದಾಯಿತ್ವವಾಗಿಲ್ಲ.  ಅವರನ್ನು ಬಿಟ್ಟರೆ ಆ ಕ್ಷೇತ್ರದಲ್ಲಿ ಗೆಲ್ಲುವವರು ಯಾರೂ ಇಲ್ಲವೆಂದುಕೊಂಡು ಅಥವಾ ಅವರುಗಳು ಪ್ರಬಲ ಮತ್ತು ಆಗರ್ಭ ಶ್ರೀಮಂತರೆಂದುಕೊಂಡು ಟಿಕೆಟ್ ಕೊಟ್ಟರೇ?   ನಮ್ಮ ಸಂವಿಧಾನವೂ ಸಹ ಇಂಥ ವ್ಯಕ್ತಿಗಳು ಚುನಾವಣೆಗೆ ಅರ್ಹರಲ್ಲ ಎಂದು ವ್ಯಾಖ್ಯಾನ ನೀಡಿಲ್ಲವೇ? ಹದಗೆಡುತ್ತಿದ್ದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಭಾರತದ ಚುನಾವಣಾ ಆಯೋಗವು, 1998 ನೇ ಇಸವಿಯಿಂದಲೇ  ಸುಮಾರು ಸುಧಾರಣೆಗಳ  ಶಿಫಾರಸ್ಸುಗಳನ್ನು ಸರ್ಕಾರದ ಅವಗಾಹನೆಗೆ ತಂದು ಸದನದಲ್ಲಿ ಅವುಗಳನ್ನು ಮಂಡಿಸಿ ಎಲ್ಲ ರಾಜಕೀಯ ಪಕ್ಷಗಳ ಅನುಮೋದನೆಯನ್ನು ಪಡೆದು ಜಾರಿಗೊಳಿಸುವ ಒತ್ತಡ ತರುವ ಒಂದು ಮಹತ್ವದ ಕೆಲಸ ಮಾಡಿದೆ.  ಆದರೆ ಆ ಶಿಫಾರಸುಗಳನ್ನು 17 ವರ್ಷಗಳು ಸಂದರೂ ಇಲ್ಲಿಯವರೆಗೆ ಏತಕ್ಕೆ ಜಾರಿಗೊಳಿಸಿಲ್ಲ ಎನ್ನುವುದು ಯಕ್ಷ ಪ್ರಶ್ನೆ.  ಭಾರತದ ಚುನಾವಣಾ ಆಯೋಗದ ಮುಖ್ಯ ಆಯುಕ್ತರುಗಳಾದ ಟಿ.ಎನ್. ಶೇಷನ್, ಎಮ್. ಎಸ್. ಗಿಲ್, ಜೆ. ಎಮ್. ಲಿಂಗ್ಡೋ, ಟಿ.ಎಸ್. ಕೃಷ್ಣಮೂರ್ತಿ, ಖುರೇಶಿ, ಮುಂತಾದವರು  ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸತತವಾಗಿ ಹಲವಾರು ಶಿಫಾರಸ್ಸುಗಳನ್ನು ಮಾಡಿದ್ದಾರೆ.  ಅವುಗಳೆಂದರೆ 1.ಅಪರಾಧಿಗಳನ್ನು/ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ  ವ್ಯಕ್ತಿಗಳನ್ನು  ರಾಜಕೀಯದಿಂದ ಹೊರಗಿಡುವುದು  2. ರಾಜಕೀಯ ಪಕ್ಷಗಳಲ್ಲಿ ಆಂತರಿಕ  ಸುಧಾರಣೆ ತರುವುದು. 3.ಜಾತಿ ಮತಗಳನ್ನು ರಾಜಕೀಯಕ್ಕೆ ಬಳಸುವುದರ ನಿಷೇಧ, 4 .ಹಣ ಕೊಟ್ಟು ಸುದ್ದಿ ಹುಟ್ಟಿಸುವಿಕೆಯನ್ನುಅಪರಾಧವೆಂದು ಪರಿಗಣಿಸುವುದು. 5. ಚುನಾವಣಾ ಸಂಬಂಧಿತ ಅಪರಾಧಗಳಿಗೆ ಶಿಕ್ಷೆಗಳನ್ನು ವೃದ್ಧಿಸುವುದು 6. ಸರ್ಕಾರದ ವತಿಯಿಂದ ಪಕ್ಷಗಳಪ್ರಚಾರಗಳು. 7.ಚುನಾವಣಾ ದಿನದ 48 ಘಂಟೆಗಳ ಮುನ್ನಾ ಪ್ರಚಾರಗಳನ್ನು ನಿಲ್ಲಿಸುವುದು. 8. ನಾಮ ಪತ್ರಗಳೊಂದಿಗೆ ಸುಳ್ಳು ಪ್ರಮಾಣ ಪತ್ರಗಳನ್ನು ಮಂಡಿಸುವಿಕೆ,9 .ಮತ ಚಲಾವಣೆಯ ನಿರಾಕರಣೆ,10 ಸೋತ ಅಭ್ಯರ್ಥಿಯ ಬಗ್ಗೆಯೂ ದೂರು ದಾಖಲಾತಿ ಮಾಡಲು ಅನುಮತಿ 11.  ಚುನಾವಣಾ ಸಂಬಂಧಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ, 12.  ಚುನಾವಣಾ ಆಯೋಗಕ್ಕೆ ಹೆಚ್ಹುವರಿ  ಅಧಿಕಾರ ನೀಡುವಿಕೆ, 13. ಮತಗಳನ್ನು ಎಣಿಸಲು ಟೋಟಲೈಸರ್ ಉಪಯೋಗಿಸುವಿಕೆ/ಅಳವಡಿಕೆ ಅಲ್ಲದೆ  ಈ ನಿಟ್ಟಿನಲ್ಲಿ ಭಾರತದ ಚುನಾವಣಾ ಆಯೋಗದ ಅಂದಿನ ಮುಖ್ಯ ಆಯುಕ್ತ ಟಿ.ಯೆಸ್. ಕೃಷ್ಣಮೂರ್ತಿ ಅಂದಿನ ಪ್ರಧಾನ ಮಂತ್ರಿ ಮನ್ ಮೋಹನ ಸಿಂಗ್ ಅವರಿಗೆ ಬರೆದ ವಿವರವಾದ ಪತ್ರವನ್ನು   ಅಂತರ್ಜಾಲ ತಾಣದಲ್ಲಿ ಪಡೆಯಬಹುದು.

ಭಾರತದ ಪ್ರಜಾಪ್ರಭುತ್ವವು ಭದ್ರವಾಗಲು ಮತಚಲಾವಣೆಯನ್ನು ಕಡ್ಡಾಯಗೊಳಿಸಬೇಕು, ರಾಜಕಾರಣಿಗಳಿಗೆ ಗರಿಷ್ಟ ವಯಸ್ಸನ್ನು ಸೀಮಿತಗೊಳಿಸಬೇಕು.ರಾಜಕಾರಣಿಗಳಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಪಡಿಸಬೇಕು. ರಾಜಕಾರಣಿಗಳು ಅಧಿಕಾರ ವಹಿಸಿಕೊಂಡ ಮೇಲೆ ಅವರುಗಳ ನಡವಳಿಕೆಗಳು ಸಂದೇಹಾಸ್ಪದವಾಗಿದ್ದರೆ ಅಥವಾ ಒಂದು ಪಕ್ಷದಿಂದ ಗೆದ್ದು ಇನ್ನೊಂದು ಪಕ್ಷಕ್ಕೆ ಅಧಿಕಾರ ದಾಹದಿಂದ  ಹಾರಿದರೆ ಅಥವಾ ಅವರ ಮತ್ತು ಅವರ ಸಂಸಾರದ ಸದಸ್ಯರುಗಳ ಆಸ್ತಿ ಪಾಸ್ತಿಗಳಲ್ಲಿ ಗಮನಾರ್ಹ ಬದಲಾವಣೆಗಳು ಸಾರ್ವಜನಿಕರ ಗಮನಕ್ಕೆ ಬಂದರೆ, ಅಂತಹವರನ್ನು ಗದ್ದುಗೆಯಿಂದ ಕೆಳಗಿಳಿಸುವ ಮತ್ತು  ವಾಪಸ್ ಕರೆಯುವ ಸುಧಾರಣೆಯನ್ನು  ಅಳವಡಿಸಬೇಕು. ಆಧಾರ್ ಸಂಖ್ಯೆ ಅವಲಂಬಿತ ಅಂತರ್ಜಾಲ ಮೂಲದ ಮತದಾನವನ್ನು ನಡೆಸುವುದನ್ನು ಅಳವಡಿಸುವ ನಿಟ್ಟಿನಲ್ಲಿ ಯೋಚಿಸಿ, ಪರಿಗಣಿಸಿ ಅದನ್ನು ಯಾವ ವಿಧವಾದ ಮೋಸ ವಂಚನೆಗಳಿಗೆ ಎಡೆ ಕೊಡದೆ ಮತ ಚಲಾವಣೆ ಮಾಡುವ ಮತ್ತು  ತಪ್ಪುಗಳಿಲ್ಲದ ವಿದ್ಯುನ್ಮಾನ ಮತದಾರರ ಫೋಟೋ ಇರುವ  ಮತಪಟ್ಟಿಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಕ್ರಿಯೆಯನ್ನು ಆರಂಭಿಸಬೇಕು. ಆಯೋಗದಲ್ಲಿ ನೊಂದಣಿಯಾಗಿ ಈಗಿರುವ ಸಾವಿರಕ್ಕೂ ಮೇಲ್ಪಟ್ಟು ಪಕ್ಷಗಳ ಸಂಖ್ಯೆಯನ್ನು ಜರಡಿ ಹಿಡಿದು ಕಡಿತಗೊಳಿಸಿ ಚಿಲ್ಲರೆ ಪಕ್ಷಗಳಿಂದ ಅಭ್ಯರ್ಥಿಗಳನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು/ಭಾಗಿಯಾಗುವುದನ್ನು ತಡೆಯಬೇಕು.

ವಸಂತಕುಮಾರ್ ಮೈಸೂರುಮಠ, ಸಮಾಜ ಸುಧಾರಕ 

 

Leave a Reply

comments

Related Articles

error: