ಪ್ರಮುಖ ಸುದ್ದಿಮೈಸೂರು

ತಡೆಯಾಜ್ಞೆ ಉಲ್ಲಂಘಿಸಿ ಕಸಾಯಿಖಾನೆಗೆ ಎಂಸಿಸಿ ಟೆಂಡರ್: ಆರೋಪ

ಮೈಸೂರು ಮಹಾನಗರದ 46ನೇ ವಾರ್ಡಿನ ಆರ್.ಎಸ್. ನಾಯ್ಡು ನಗರ ಕೆಸರೆಯ ಜನವಸತಿ ಪ್ರದೇಶದಲ್ಲಿ ಮಹಾನಗರ ಪಾಲಿಕೆಯು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳನ್ನು ಕಡೆಗಣಿಸಿ ಬೃಹತ್ ಪ್ರಮಾಣದ ಯಾಂತ್ರಿಕ ಕಸಾಯಿಖಾನೆ ನಿರ್ಮಿಸಲು ಟೆಂಡರ್ ಕರೆದಿದೆ ಎಂದು “ಕೆಸರೆಯಲ್ಲಿ ಆಧುನಿಕ ಯಾಂತ್ರಿಕ ಕಸಾಯಿಖಾನೆ ನಿರ್ಮಾಣ ವಿರೋಧಿ ಸಂಘಟನೆಗಳ ಒಕ್ಕೂಟ” ಆರೋಪಿಸಿದೆ.

2004ರಿಂದಲೂ ಜನರ ನಿರಂತರ ಪ್ರತಿಭಟನೆ, 2014-15ರಲ್ಲಿ 186 ದಿನಗಳ ಧರಣಿ ಸತ್ಯಾಗ್ರಹ, ಶಾಲೆ, ಕಾಲೇಜು, ಆಸ್ಪತ್ರೆ, ದೇವಸ್ಥಾನ, ಮಸೀದಿ, ಚರ್ಚ್ ಮೊದಲಾದ ಸಾರ್ವಜನಿಕ ಸಂಸ್ಥೆಗಳ ಕಳಕಳಿಯ ಮನವಿಗಳನ್ನೂ ಎಂಸಿಸಿ ಪರಿಗಣಿಸಿಲ್ಲ. ಕೆಲವರ ಪ್ರತಿಷ್ಠೆ, ಲಾಭಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರುವ ಎಂಸಿಸಿ, ಜನನಿಬಿಡ ಪ್ರದೇಶದಲ್ಲಿ ಖಸಾಯಿಖಾನೆ ನಿರ್ಮಾಣ ಮಾಡಲು ಹಠ ತೊಟ್ಟಂತಿದೆ. ಮಲಿನನೀರು ಶುದ್ಧೀಕರಣ ಘಟಕ (ಎಸ್.ಟಿ.ಪಿ) ಇದ್ದ ತೆಂಗಿನಮರಗಳಿರುವ ಜಾಗವನ್ನೇ ಕಸಾಯಿಖಾನೆ ನಿರ್ಮಾಣಕ್ಕೆ ಗುರುತಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಪೂರ್ಣಪ್ರಮಾಣದ ತಂಡ ಸ್ಥಳಪರಿಶೀಲನೆ ಮಾಡಿ ಸತ್ಯಾಗ್ರಹ ನಿರತರ, ಸ್ಥಳೀಯ ನಿವಾಸಿಗಳ ಅಹವಾಲುಗಳನ್ನು ಆಲಿಸಿತ್ತು. ನಂತರ ವಸ್ತುನಿಷ್ಠ ವಿವರಗಳೊಂದಿಗೆ ವರದಿ ನೀಡಿ – ಸ್ಥಳೀಯ ಜನರಲ್ಲಿರುವ ಆತಂಕಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಕಸಾಯಿಖಾನೆಯನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸಬೇಕೆಂದೂ ಮಂಡಳಿಯು ಶಿಫಾರಸು ಮಾಡಿತ್ತು.

ಹೀಗಿದ್ದರೂ ಮಹಾನಗರ ಪಾಲಿಕೆಯು ಈ ಆದೇಶವನ್ನು ಉಲ್ಲಂಘಿಸಿ ಕಸಾಯಿ ಖಾನೆ ನಿರ್ಮಾಣಕ್ಕಾಗಿ ಪತ್ರಿಕೆಗಳಲ್ಲಿ ಟೆಂಡರ್ ಆಹ್ವಾನಿಸಿದೆ. ಇದು ಆದೇಶ ಮತ್ತು ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಟೆಂಡರ್ ವಿಷಯವನ್ನು ಪರಿಸರ ಮಂತ್ರಾಲಯದ ಗಮನಕ್ಕೂ ತರಲಾಗಿದೆ ಎಂದು ಒಕ್ಕೂಟದ ಸಂಚಾಲಕ ಇ. ಮಾರುತಿ ರಾವ್ ಪವಾರ್ ತಿಳಿಸಿದ್ದಾರೆ.

Leave a Reply

comments

Related Articles

error: