ಮೈಸೂರು

ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಕ್ಲಬ್ ಗಳ ಮೇಲೆ ಸಿಸಿಬಿ ದಾಳಿ : ಎರಡು ಲಕ್ಷದ ಅರವತ್ತೇಳು ಸಾವಿರ ರೂ.ನಗದು ವಶ

ಮೈಸೂರು,ಜು.24:-  ನಗರದ ಸಿಸಿಬಿ ಪೊಲೀಸರು ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಕ್ಲಬ್ ಗಳ ಮೇಲೆ ದಾಳಿ ನಡೆಸಿ ಕ್ಲಬ್ ಸದಸ್ಯರಲ್ಲದವರು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಎರಡು ಲಕ್ಷದ ಅರವತ್ತೇಳು ಸಾವಿರ ರೂ.ನಗದು ಹಾಗೂ ಮೂವತ್ತ್ಮೂರು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಪೊಲೀಸರಿಗೆ  ಕೆಲವು ಕ್ಲಬ್ ಗಳಲ್ಲಿ ಕ್ಲಬ್ ಸದಸ್ಯರಲ್ಲದವರು ಜೂಜಾಟ ಮತ್ತು ಇತರೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಾಹಿತಿಯಾಧರಿಸಿ ದಾಳಿ ನಡೆಸಿದ್ದು, ಕೆ.ಆರ್.ವೃತ್ತದ ವಿಶ್ವೇಶ್ವರಯ್ಯ ಕಟ್ಟಡದ ಎರಡನೇ ಮಹಡಿಯಲ್ಲಿನ ನ್ಯೂ ಮಾಡ್ರನ್ ರಿಕ್ರಿಯೇಷನ್ ಕ್ಲಬ್ ನ ಅಧ್ಯಕ್ಷ ಸೇರಿದಂತೆ 37ಮಂದಿಯನ್ನು ದಸ್ತಗಿರಿ ಮಾಡಿ ಅವರಿಂದ 1,51,630ರೂ.ನಗದು ಹಾಗೂ 33 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಪೋರ್ಟ್ಸ್ ಕ್ಲಬ್ ಮೇಲೆಯೂ ಇದೇ ರೀತಿಯ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಮದ್ಯ ಸೇವಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಹಾಗೂ ಕ್ಲಬ್ ನ ಆಡಳಿತ ಮಂಡಳಿಯ ವಿರುದ್ಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಫಾರಂ ಹೌಸ್ ನಲ್ಲಿರುವ ಹೊಯ್ಸಳ ಸ್ಪೋರ್ಟ್ಸ್ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಜೂಜಾಟ ನಡೆಸುತ್ತಿದ್ದ ಸದಸ್ಯರಲ್ಲದವರನ್ನು ಹಾಗೂ ಕ್ಲಬ್ ನ ಮಾಲಿಕರು ಸೇರಿ 32 ಮಂದಿಯನ್ನು ದಸ್ತಗಿರಿ ಮಾಡಿ ಪಣಕ್ಕಿಟ್ಟಿದ್ದ 1,15,680ರೂ.ನಗದು ವಶಪಡಿಸಿಕೊಂಡಿದ್ದಾರೆ. ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯ ಮರ್ಚೆಂಟ್ ಕ್ಯೂ ಸ್ಪೋರ್ಟ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ಮೇಲೆಯೂ ಪೊಲೀಸರು ದಾಳಿ ನಡೆಸಿದ್ದು, ಕ್ಲಬ್ ನಲ್ಲಿ ಸದಸ್ಯರಲ್ಲದವರು ಅಲ್ಲಿ ಧೂಮಪಾನ ಮಾಡುತ್ತಿದ್ದು ಅವರ ಮೇಲೆ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: