ಪ್ರಮುಖ ಸುದ್ದಿಮೈಸೂರು

ಡೆಂಗ್ಯೂ ನಿಯಂತ್ರಣಕ್ಕೆ ಮಹಾನಗರ ಪಾಲಿಕೆಯಿಂದ ವಿಶೇಷ ಮುಂಜಾಗೃತ ಕ್ರಮ : ಮೇಯರ್

ಮೈಸೂರು,ಜು.24 : ಡೆಂಗ್ಯೂ ನಿಯಂತ್ರಣಕ್ಕಾಗಿ ಪಾಲಿಕೆಯ 65 ವಾರ್ಡುಗಳಲ್ಲಿಯೂ ಔಷಧ ಸಿಂಪಡಣೆ, ಸ್ವಚ್ಚತೆ ಸೇರಿದಂತೆ ಹಲವಾರು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಹಾಪೌರ ಎಂ.ಜೆ.ರವಿಕುಮಾರ್ ತಿಳಿಸಿದರು.

ಕಳೆದ ಕೆಲವು ತಿಂಗಳುಗಳಿಂದ ಮೈಸೂರು ನಗರದ ವಿವಿದ ಬಡಾವಣೆಗಳಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರು ಆತಂಕಕೀಡಾಗಿದ್ದಾರೆ. ಈಗಾಗಲೇ ನಗರದ ಎಲ್ಲಾ ಆಸ್ಪತ್ರೆಗಳಲ್ಲಿಯೂ ರೋಗಿಗಳ ಸಂಖ್ಯೆ ಹೆಚ್ಚಿದ್ದು ಹಾಸಿಗೆ ಕೊರತೆ ಎದುರಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನಗರಪಾಲಿಕೆ ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದು ನಗರಪಾಲಿಕೆ ವ್ಯಾಪ್ತಿಯ ಎಲ್ಲಾ 65 ವಾರ್ಡ್ ಗಳಲ್ಲಿಯೂ ಪ್ರತಿ ದಿನ ಸ್ವಚ್ಚತೆ, ಔಷಧ ಸಿಂಪಡಣೆ, ಫಾಗಿಂಗ್ ಮಾಡಿಸಲಾಗುತ್ತಿದೆ. ಸತತವಾಗಿ ಒಂದು ತಿಂಗಳಿನಿಂದ ಸೊಳ್ಳೆ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಿದ ಪರಿಣಾಮ ಕಳೆದ ಹದಿನೈದು ದಿನಗಳಿಂದ ಡೆಂಗ್ಯೂ ಪೀಡಿತರ ಸಂಖ್ಯೆ ಕುಸಿತವಾಗಿದೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಮೈಸೂರು ನಗರದ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ನಗರದಾದ್ಯಂತ ಬ್ಯಾನರ್ ಹಾಗೂ ಪೋಸ್ಟರ್ ಹಾಕುವುದನ್ನು ನಿಷೇಧಿಸಲಾಗಿದೆ. ಪಾಲಿಕೆಯ ನಿಯಮಗಳನ್ನು ಉಲ್ಲಂಘಿಸಿ ಯಾವುದೇ  ಪಕ್ಷದವರು ಬ್ಯಾನರ್ಸ್, ಪೋಸ್ಟರ್, ಬಂಟಿಂಗ್ ಗಳನ್ನು ಹಾಕಿದರೇ ಅವುಗಳನ್ನು ತೆರವುಗೊಳಿಸುವುದರೊಂದಿಗೆ ಯಾವುದೇ ಮುಲಾಜಿಲ್ಲದೇ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ಈ ನಿಟ್ಟಿನಲ್ಲಿ ನಗರದ ಸ್ವಚ್ಚತೆಗೆ ವಿಶೇಷ ಗಮನ ಹರಿಸಿ ಜನಜಾಗೃತಿಯನ್ನು ಮೂಡಿಸಲಾಗುತ್ತಿದ್ದು, ಪಾಲಿಕೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕೆಂದು ಮನವಿ ಮಾಡಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: