ಮೈಸೂರು

ಸತತ 201 ಸಂಚಾರ ಉಲ್ಲಂಘನೆ! ಸಿಕ್ಕಿಬಿದ್ದವನಿಂದ ಬೈಕ್ ವಶಕ್ಕೆ ಪಡೆದ ಸಿದ್ದಾರ್ಥನಗರ ಪೊಲೀಸರು

ಮೈಸೂರು, ಜುಲೈ 24 : ಮೈಸೂರು ನಗರ ಸಿದ್ದಾರ್ಥ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಹರೀಶ್ ಕುಮಾರ್ ರವರು ಸಿಬ್ಬಂದಿಗಳೊಂದಿಗೆ ಜುಲೈ 22  ರಂದು ರಾತ್ರಿ ಮಿರ್ಜಾ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವಾಗ ಕೆಎ-55 ಇ-4785 ಬಜಾಜ್ ಪ್ಲಾಟಿನ ಬೈಕ್‍ನಲ್ಲಿ ಬಂದ ವ್ಯಕ್ತಿಯೊಬ್ಬ ಪೊಲೀಸರನ್ನು ಕಂಡು ವಾಹನ ತಿರುಗಿಸಿಕೊಂಡು ಅಲ್ಲಿಂದ ಹೊರಟು ಹೋಗಲು ಪ್ರಯತ್ನಿಸಿದ್ದಾನೆ.

ಸಂಚಾರ ಪೊಲೀಸರು ಈತನನ್ನು ಹಿಡಿದು ವಿಚಾರ ಮಾಡಲಾಗಿ ಈತನು ತನ್ನ ಹೆಸರು- ರೋಷನ್ ಆಲಿ ಬೇಗ್, ನಂ: 254, 2ನೇ ಕ್ರಾಸ್, 2ನೇ ಹಂತ, ರಾಜೀವ್ ನಗರ, ಮೈಸೂರು ಎಂದು ತಿಳಿಸಿದ್ದು, ವಾಹನದ ಬಗ್ಗೆ ಬ್ಲಾಕ್‍ಬೆರಿಯಲ್ಲಿ ಪರಿಶೀಲಿಸಲಾಗಿ ಈ ವಾಹನದ ವಿರುದ್ದ ಒಟ್ಟು 201 ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇರುವುದು ಪತ್ತೆಯಾಗಿದೆ. ಆದರೆ ಈ ಯಾವುದೇ ಪ್ರಕರಣಕ್ಕೂ ದಂಡ ಪಾವತಿಸದೇ ಇರುವುದು ಕಂಡು ಬಂದಿದೆ. ಪೊಲೀಸ್ ಇನ್ಸ್‍ಪೆಕ್ಟರ್ ಹರೀಶ್ ಕುಮಾರ್ ರವರು ಈ ವಾಹನವನ್ನು ವಶಕ್ಕೆ ಪಡೆದು ದಂಡವನ್ನು ಪಾವತಿಸುವಂತೆ ರೋಷನ್ ಆಲಿ ಬೇಗ್‍ರವರಿಗೆ ತಿಳುವಳಿಕೆ ನೀಡಿ ನೋಟಿಸ್ ನೀಡಿದ್ದಾರೆ.

ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ದಂಡ ಪಾವತಿ ಮಾಡದೇ ತಲೆಮರೆಸಿಕೊಂಡಿರುವವರು ಕೂಡಲೇ ದಂಡವನ್ನು ಪಾವತಿಸಬೇಕು. ತಪ್ಪಿದಲ್ಲಿ ಅಂತಹವರ ವಿರುದ್ದ ಕಾನೂನಿನ ಕ್ರಮ ಕೈಗೊಳ್ಳಲಾಗುವುದೆಂದು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: