ಮೈಸೂರು

ಕಬಿನಿ ನೀರಾವರಿ ಕಚೇರಿಗೆ ರೈತರಿಂದ ಮುತ್ತಿಗೆ

ಮೈಸೂರು ಜಿಲ್ಲೆಯ ನಂಜನಗೂಡಿನ ನುಗು ಮೇಲ್ದಂಡೆ ನಾಲೆಯಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ನೂರಕ್ಕೂ ಅಧಿಕ ರೈತರು ಹುಲ್ಲಹಳ್ಳಿಯಲ್ಲಿರುವ ಕಬಿನಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿ ಕಚೇರಿಯೊಳಗಿದ್ದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ದಿಗ್ಬಂಧನ ವಿಧಿಸಿದ ಘಟನೆ ನಡೆದಿದೆ.

ಹುಲ್ಲಹಳ್ಳಿ ಕಣೆನೂಡು ಮಾದನಹಳ್ಳಿಯಿಂದ ಆಗಮಿಸಿದ್ದ ನೂರಕ್ಕೂ ಅಧಿಕ ರೈತರು ಕಚೇರಿ ಮುಂಭಾಗ ಜಮಾಯಿಸಿ ನೀರಾವರಿ ಇಲಾಖೆ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ರೈತರು ನುಗು ಅಣೆಕಟ್ಟೆಯಲ್ಲಿ ನೀರು ಸಮರ್ಪಕವಾಗಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರಿಯಾಗಿ ಹರಿಯುತ್ತಿಲ್ಲ. ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಆದರೆ ರೈತರ ವಿರುದ್ಧವೇ ದೂರುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ನಾಲೆಯ ಅಚ್ಚುಕಟ್ಟು ಭಾಗಕ್ಕೆ ನೀರು ತಲುಪುತ್ತಿಲ್ಲ. ಈ ಕುರಿತು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ರೈತರ ಭತ್ತದ ಬೆಳೆಗಳು ಒಣಗುತ್ತಿವೆ. ತಕ್ಷಣ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ದಿಗ್ಬಂಧನ ತೆರವುಗೊಳಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರೈತರನ್ನು ಸಮಾಧಾನಪಡಿಸಿದ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀನಿವಾಸ್ ಮಾತನಾಡಿ ನಾಲಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಮಳೆಯಾಗಿದ್ದರಿಂದ ನಾಲೆಯಲ್ಲಿ ನೀರು ಹರಿಸುವಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಂದಿನಿಂದಲೇ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಭಿಯಂತರರು ಭರವಸೆ ನೀಡುತ್ತಿದ್ದಂತೆ ರೈತರು ದಿಗ್ಬಂಧನ ತೆರವುಗೊಳಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಉಪಾಧ್ಯಕ್ಷ ಶಿರಮಳ್ಳಿ ಸಿದ್ದಪ್ಪ, ಗ್ರಾಮಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವರಾಮೇಗೌಡ, ಪಿಎಸಿಸಿ ಬ್ಯಾಂಕ್ ನಿರ್ದೇಶಕ ಮಹೇಶ್, ಕೆಂಡಗಣ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: