ಮೈಸೂರು

ಜಿಯೋ ಅಲೆಯಲ್ಲಿ ತೇಲುತ್ತಿರುವ ಮೈಸೂರಿಗರು…

15 ಸಾವಿರ ಸಿಮ್ ವಿತರಣೆ; ಅಂಗಡಿಗಳ ಮುಂದೆ ಇನ್ನೂ ಇದೆ ಗ್ರಾಹಕರ ಸಾಲು

reliance-jio-sim-card

ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಎಬ್ಬಿಸಿರುವ ಅಲೆ ಅಷ್ಟಿಷ್ಟಲ್ಲ. ಎಲ್ಲೆಡೆಯೂ ಜಿಯೋ ಮಾತುಗಳೇ ತರಂಗದ ಅಲೆಗಳಂತೆ ತೇಲಿ ಬರುತ್ತಿವೆ. ಈ ಅಲೆಯಲ್ಲಿ ಮೈಸೂರಿನ ಮಂದಿಯೂ ತೇಲುತ್ತಿದ್ದಾರೆ. ಜಿಯೋ ಸಿಮ್‌ಗಾಗಿ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಬೆಳ್ಳಂಬೆಳಗ್ಗೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ನಿಜ. ರಿಲಾಯನ್ಸ್ ಜಿಯೋ ೪ಜಿ ಉಚಿತ ಸಿಮ್ ಗ್ರಾಹಕರ ತಲೆಕೆಡಿಸುತ್ತಿರುವುದಂತೂ ಸುಳ್ಳಲ್ಲ. ಪ್ರತಿಯೊಬ್ಬ ಮೊಬೈಲ್ ಗ್ರಾಹಕನೂ ಜಿಯೋ 4ಜಿ ಉಚಿತ ಸಿಮ್ ಪಡೆಯಲು ಕಾತರನಾಗಿದ್ದಾನೆ. ಜೀವನ ಪೂರ್ತಿ ಉಚಿತ ಕರೆ ಹಾಗೂ ಡಿ.31ರ ವರೆಗೆ 4ಜಿ ಸ್ಪೀಡ್‌ನ 4 ಜಿಬಿ ಡಾಟಾ ಯಾರಿಗೆ ತಾನೆ ಬೇಡ ಹೇಳಿ.  ರಿಲಾಯನ್ಸ್ ಜಿಯೋ ಎಬ್ಬಿಸಿರುವ ಅಲೆಯಿಂದಾಗಿ ಇತರೆ ಟೆಲಿಕಾಂ ಕಂಪನಿಗಳು ತತ್ತರಿಸಿ ಹೋಗಿವೆ. ಜಿಯೋ ವಿಶೇಷತೆಗಳನ್ನು ಮುಕೇಶ್ ಅಂಬಾನಿ ಬಿಚ್ಚಿಡುತ್ತಿದ್ದಂತೆ ಉಳಿದ ಟೆಲಿಕಾಂ ಕಂಪನಿಗಳ ಷೇರುಗಳ ಬೆಲೆ ಪಾತಾಳಕ್ಕಿಳಿದಿದೆ. ನಗರದಲ್ಲಿ ಎಲ್ಲ ಅಂಗಡಿಗಳ ಮುಂದೆಯೂ ಜಿಯೋ ಬೋರ್ಡ್ ರಾರಾಜಿಸುತ್ತಿದೆ. ಇತರೆ ಕಂಪನಿಗಳ ಸಿಮ್‌ಗಳನ್ನು ಕೇಳುವವರೇ ಇಲ್ಲ. ಯಾವ ಅಂಗಡಿಯಲ್ಲಿ ಕೇಳಿದರೂ ಜಿಯೋ ಸಿಮ್‌ಗಳೇ ಸಿಗುತ್ತಿಲ್ಲ. ಸಿಗಬೇಕೆಂದರೆ ಬೆಳ್ಳಂಬೆಳಗ್ಗೆಯೇ ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲಬೇಕು. ವಾರಗಟ್ಟಲೆ ಚಪ್ಪಲಿ ಸವೆಸಬೇಕು.

ಸಿಮ್ ವಿತರಣೆಗೆ 2 ವಿಭಾಗ: ಮೈಸೂರಿನಲ್ಲಿ ಸಿಮ್ ವಿತರಣೆಯನ್ನು 2 ವಿಭಾಗಗಳಾಗಿ ವಿಂಗಡಿಸಿಕೊಳ್ಳಲಾಗಿದೆ. ಮೈಸೂರು ದಕ್ಷಿಣ ಮೋಹನ್ ಅವರ ಸ್ಟ್ರಾಬೆರಿ ಡಿಸ್ಟ್ರಿಬ್ಯೂಷನ್ ಹಾಗೂ ಮೈಸೂರು ಉತ್ತರದಲ್ಲಿ ಎಸ್ ಅಂಡ್ ಎಸ್ ಕಂಪನಿ ಸಿಮ್ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿದೆ. ಮೈಸೂರು ದಕ್ಷಿಣ ಅರಸು ರಸ್ತೆಯಿಂದ ಜೆ.ಪಿ.ನಗರದವರೆಗೆ ಹಾಗೂ ಕುವೆಂಪು ನಗರದ ಡಬಲ್ ರೋಡ್‌ನಿಂದ ವರುಣಾವರೆಗೆ ಬರಲಿದ್ದು ನಗರದ ಉಳಿದ ಭಾಗಗಳಲ್ಲಿ ಎಸ್ ಅಂಡ್ ಕಂಪನಿ ಸಿಮ್ ವಿತರಿಸಲಿದೆ. ಒಟ್ಟಾರೆ, ಮೈಸೂರು ಜಿಲ್ಲೆಯಲ್ಲಿ ಈವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಸಿಮ್‌ಗಳನ್ನು ವಿತರಿಸಲಾಗಿದೆ.

ಚಂದಮಾಮನ ಕಟ್ಟುಕತೆ:ಮೈಸೂರು ದಕ್ಷಿಣದಲ್ಲಿ ಸಿಮ್ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದು 253 ಅಂಗಡಿಗಳಿಗೆ 8 ರಿಂದ 10 ಸಾವಿರ ಸಿಮ್ ವಿತರಣೆ ಮಾಡಿದ್ದೇನೆ. ಜಿಲ್ಲೆಯ ನಗರ, ಗ್ರಾಮೀಣ ಭಾಗ ಸೇರಿದಂತೆ ಎಲ್ಲೆಡೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೆಟ್‌ವರ್ಕ್ ಕೂಡ ಅಷ್ಟೇ ಉತ್ತಮವಾಗಿದೆ. ಕೆಲವೆಡೆ ಸಿಮ್ ಸ್ಲಾಟ್ ಅನ್ನು ಬ್ಲಾಕ್ ಮಾಡುತ್ತಾರೆ ಎಂಬ ಗಾಳಿ ಸುದ್ದಿ ಹಬ್ಬಿದೆ.

ಆದರೆ, ಇದು ಚಂದಮಾಮನ ಕಟ್ಟುಕತೆ. ಸಿಮ್ ಸ್ಲಾಟನ್ನು ಯಾವುದೇ ಕಾರಣಕ್ಕೂ ಬ್ಲಾಕ್ ಮಾಡಲು ಸಾಧ್ಯವೇ ಇಲ್ಲ. ಜಿಯೋ ಬೆಳವಣಿಗೆ ಸಹಿಸಲಾಗದವರು ಈ ರೀತಿಯ ಕಟ್ಟುಕತೆಗಳನ್ನು ತೇಲಿ ಬಿಡುತ್ತಿದ್ದಾರೆ. 1986ರಲ್ಲಿ ಹೀರೋಹೋಂಡಾ ಬೈಕ್ ಮಾರುಕಟ್ಟೆ ಪ್ರವೇಶಿಸಿದಾಗಲೂ ಇದೇ ರೀತಿಯ ಆಪಾದನೆಗಳು ಕೇಳಿ ಬಂದವು. ಆದರೆ, ಇಂದು ಹೀರೋಹೋಂಡ ಯಾವ ಮಟ್ಟಕ್ಕೆ ಬೆಳೆದು ನಿಂತಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಕೆಲವು ಕಡೆ ಇಂಟರ್ ಕನೆಕ್ಟಿವಿಟಿ ಸಮಸ್ಯೆಯಿಂದ ಬೇರೆ ಸಿಮ್‌ಗಳಿಗೆ ಕಾಲ್ ಕನೆಕ್ಟ್ ಆಗುತ್ತಿಲ್ಲ. ಆರಂಭದಲ್ಲಿ ಈ ರೀತಿಯ ಸಣ್ಣಪುಟ್ಟ ಸಮಸ್ಯೆ ಸರ್ವೇ ಸಾಮಾನ್ಯ. ಜಿಯೋಗೆ ಮೊದಲಿದ್ದ ಬೇಡಿಕೆ ಈಗಲೂ ಇದೆ. ಮುಂದೆಯೂ ಇರಲಿದೆ ಎಂದು ಸ್ಟ್ರಾಬೆರಿ ಡಿಸ್ಟ್ರಿಬ್ಯೂಷನ್ ಮಾಲಿಕ ಮೋಹನ್ ‘ಸಿಟಿಟುಡೆ’ಗೆ ತಿಳಿಸಿದ್ದಾರೆ.

ರಿಲಾಯನ್ಸ್ ಜಿಯೋ ನೀಡಿರುವ ಆಫರ್‌ಗಳು ಯಾವ ಕಂಪನಿಯಲ್ಲೂ ಇಲ್ಲ. ಇಂಟರ್‌ನೆಟ್ ಸ್ಪೀಡ್ ಅತ್ಯುತ್ತಮವಾಗಿದೆ. ಜಿಯೋದಿಂದ ಬೇರೆ ಸಿಮ್‌ಗಳಿಗೆ ಕಾಲ್ ಮಾಡಿದರೆ ಸರಿಯಾಗಿ ಕನೆಕ್ಟ್ ಆಗುವುದಿಲ್ಲ. ಎರಡು ಮೂರು ಬಾರಿ ಪ್ರಯತ್ನಿಸಬೇಕು. ಇದನ್ನು ಹೊರತುಪಡಿಸಿ ನಗರದ ಎಲ್ಲ ಭಾಗಗಳಲ್ಲೂ ನೆಟ್‌ವರ್ಕ್ ಉತ್ತಮವಾಗಿದೆ. ಡಿಸೆಂಬರ್ ಬಳಿಕ ಯಾವ ರೀತಿಯ ಆಫರ್‌ಗಳನ್ನು ರಿಲಾಯನ್ಸ್ ನೀಡಲಿದೆ ಎಂದು ಕಾದು ನೋಡಬೇಕು ಎನ್ನುತ್ತಾರೆ ರಿಲಯಲ್ಸ್ ಜಿಯೊ ಸಿಮ್ ತೆಗೆದುಕೊಂಡಿರುವ ಗ್ರಾಹಕ ಪಿ. ಜಯಂಶಕರ್ ಅವರು.

ಭಾಸ್ಕರ್

Leave a Reply

comments

Related Articles

error: