ಮೈಸೂರು

ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುತ್ತೇವೆ: ಸಾಹಿತಿ ಡಾ.ಚಿದಾನಂದ ಮೂರ್ತಿ

ಟಿಪ್ಪುವಿನ ಬಗ್ಗೆ ವಾಸ್ತವತೆಯನ್ನು ಮರೆಮಾಚಿ ಕೇವಲ ಮುಸ್ಲಿಮರ ಮತ ಓಲೈಕೆಗಾಗಿ ಜಯಂತಿಯನ್ನು ಆಚರಿಸುತ್ತಿರುವುದು ಖಂಡನೀಯ. ಟಿಪ್ಪು ಒಬ್ಬ ಮತಾಂಧ, ಧರ್ಮಾಂಧ, ದೇಶದ್ರೋಹಿ ಎನ್ನುವುದು ಇತಿಹಾಸದ ಶಾಸನಗಳಲ್ಲಿ ಉಲ್ಲೇಖವಾಗಿದ್ದು ಈ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಯನ್ನು ಪ್ರಬಲವಾಗಿ ವಿರೋಧಿಸಲಾಗುವುದು ಎಂದು ಖ್ಯಾತ ಸಾಹಿತಿ ಹಾಗೂ ಇತಿಹಾಸ ಸಂಶೋಧಕ ಡಾ.ಚಿದಾನಂದಮೂರ್ತಿ ತಿಳಿಸಿದರು.

ಅವರು ನಗರದ ಪತ್ರಕರ್ತರ ಭವನದಲ್ಲಿ ಅ.18ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನವೆಂಬರ್ 10ರಂದು ಸರ್ಕಾರ ಆಯೋಜಿಸಿರುವ ಟಿಪ್ಪು ಜಯಂತಿಯು ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕದಡುವ ಹುನ್ನಾರವಾಗಿದೆ. ಟಿಪ್ಪು ಯುದ್ಧದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಿಂದೂ ಹಾಗೂ ಕ್ರೈಸ್ತರನ್ನು ಕೊಂದಿದ್ದಾನೆ ಮತ್ತು ಮತಾಂತರಗೊಳಿಸಿದ್ದಾನೆ. ಈ ಬಗ್ಗೆ ಇತಿಹಾಸದಲ್ಲಿ ಸಾಕಷ್ಟು ಪುರಾವೆಗಳಿವೆ. ಹಲವಾರು ದೇವಾಲಯಗಳನ್ನು ಮಸೀದಿಯಾಗಿ ಪರಿವರ್ತಿಸಿದ್ದಾನೆ. ಮೈಸೂರು ಸಂಸ್ಥಾನದ ಅಧಿದೇವತೆ ಚಾಮುಂಡಿಯ ಮೂಲವಿಗ್ರಹ ದ್ವಂಸಗೊಳಸಿದ್ದಾನೆ. ಇಂದಿಗೂ ಧ್ವಂಸಗೊಂಡ ವಿಗ್ರಹ ನೋಡ ಸಿಗುವುದು. ಹಿಂದೂ-ಕ್ರೈಸ್ತರನ್ನು ಕೊಲ್ಲಲು ನನ್ನ ಖಡ್ಗವಿದೆ ಎನ್ನುವ ಸೂಕ್ತಿಯು ಟಿಪ್ಪುವಿನ ಖಡ್ಗದಲ್ಲಿ ಬರೆಯಲಾಗಿತ್ತು. ಟಿಪ್ಪುವಿನ ಜಯಂತಿಯನ್ನು ಕೇವಲ ಹಿಂದೂಗಳು ಮಾತ್ರವಲ್ಲ ಎಲ್ಲಾ ಜನಾಂಗದವರು ವಿರೋಧಿಸಬೇಕು. ಕಾಶ್ಮೀರದ ಉಗ್ರರ ತಾಣಗಳು ತಲೆಯೆತ್ತಲು ಕುರಾನ್ ಕಾರಣವೇ? ಎಂದು ಪ್ರಶ್ನಿಸಿ ಸಾವಿರಾರು ವರ್ಷಗಳ ಹಿಂದೆ ಟಿಪ್ಪು ಹಾಗೂ ಔರಂಗಜೇಬ್ ನಡೆಸಿದ ವಿಧ್ವಂಸಕ ಕೃತ್ಯಗಳು ಇಂದು ಉಗ್ರರು ನಡೆಸುತ್ತಿದ್ದಾರೆ ಎಂದು ಇತಿಹಾಸವನ್ನು ವಾಸ್ತವತೆಗೆ ಸಮೀಕರಿಸಿದರು. ನಾನು ಅನ್ಯ ಧರ್ಮ ದ್ವೇಷಿಯಲ್ಲ. ಹಿಂದೂ ಧರ್ಮ ಪ್ರೇಮಿ. ಅವರವರ ಧರ್ಮ ಅವರಿಗೆ ಹೆಚ್ಚು. ನನ್ನನ್ನು ಶ್ರೀರಾಮಸೇನೆ ಕಾರ್ಯಕರ್ತ ಹಿಂದೂ ಪ್ರೇಮಿ ಎಂದು ಲೇವಡಿ ಮಾಡುವರು ಎಂದು ಮಾರ್ಮಿಕವಾಗಿ ನುಡಿದರು.

ರಾಜ್ಯದಲ್ಲಿ ಪ್ರತಿಭಟನೆಗೆ ನಿರ್ಧಾರ: ಮೈಸೂರಿನ ಭಾಗದಲ್ಲಿ ಆಡಳಿತ ನಡೆಸಿದ ಟಿಪ್ಪುವಿನ ಜಯಂತಿಯನ್ನು ಈ ನೆಲದಲ್ಲಿಯೇ ವಿರೋಧಿಸಬೇಕು ಎನ್ನುವ ಉದ್ದೇಶದಿಂದಲೇ ಇಲ್ಲಿಯೇ ಸುದ್ದಿಗೋಷ್ಠಿ ನಡೆಸಲಾಗುತ್ತಿದೆ ಎಂದು ಮಾತಿಗಿಳಿದ ಶ್ರೀರಾಮಸೇನೆಯ ರಾಷ್ಟ್ರೀಯ ಸಂಚಾಲಕ ಪ್ರಮೋದ್ ಮುತಾಲಿಕ್. ಸರ್ಕಾರವು ಸರ್ವಾಧಿಕಾರಿ ಧೋರಣೆಯನ್ನು ತಳೆದಿದ್ದು ಭಂಡತನ ಪರಮಾವಧಿಯಾಗಿದೆ. ಕಳೆದ ಬಾರಿ ಟಿಪ್ಪು ಜಯಂತಿ ಆಚರಿಸಿ ಒಬ್ಬ ಮುಗ್ಧನ ಜೀವವನ್ನು ಬಲಿತೆಗೆದುಕೊಂಡಿದ್ದು ಅದರಿಂದ ಎಚ್ಚೆತ್ತುಕೊಳ್ಳದೇ ಅಧಿಕಾರದ ದಾಹ ಹಾಗೂ ಮುಸ್ಲಿಂ ಮತ ಬ್ಯಾಂಕ್  ಓಲೈಕೆಗಾಗಿ ಟಿಪ್ಪು ಜಯಂತಿ ಆಯೋಜಿಸಿ ಬಹುಸಂಖ್ಯಾತರ ಮೇಲೆ ದೌರ್ಜನ್ಯ ದಬ್ಬಾಳಿಕೆ ಎಸಗುತ್ತಿದೆ ಎಂದು ಕಿಡಿಕಾರಿದರು. ಸರ್ಕಾರದ ಈ ನಿಲುವನ್ನು ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಿಪ್ಪುವಿನ ಇತಿಹಾಸ ಗೊತ್ತಿಲ್ಲವೇ? ಇಲ್ಲವೆಂದರೆ ದಾಖಲೆಗಳನ್ನು ಒದಗಿಸುವೆವು ಎಂದು ತಿಳಿಸಿದರು. ಟಿಪ್ಪು ಜಯಂತಿಯ ವಿರೋಧಿಸಿ ಮುಖ್ಯಮಂತ್ರಿಗಳಿಗೆ ಟಿಪ್ಪು ಜಯಂತಿ ಆಚರಿಣೆಗೆ ವಿರೋಧಿಸಿ ಪತ್ರ ಬರೆದು ರಾಜ್ಯದ ಶಾಂತಿ ಸುವ್ಯವಸ್ಥೆ ಬಗ್ಗೆ ಕೋರಲಾಗುವುದು. ಒಂದೊಮ್ಮೆ ಸರ್ಕಾರವು ಮನವಿಯನ್ನು ಸ್ವೀಕರಿಸದೆ ಇದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದ್ದು ಹಿಂದೂಪರ ಸಂಘಟನೆಗಳು, ಕನ್ನಡ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ಚಿದಾನಂದ ಮೂರ್ತಿಯವರನ್ನು ಮೈಸೂರು ಪೇಟ ತೊಡಿಸಿ, ಗಂಧದ ಹಾಕಿ ಮೈಸೂರು ರಕ್ಷಣಾ ವೇದಿಕೆಯಿಂದ ಸನ್ಮಾನಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಮಿಕ ಒಕ್ಕೂಟದ ಮೋಹನ್ ರಾಜ್, ವಿಶ್ವ ಹಿಂದೂ ಸಂರಕ್ಷಣದ ಅರ್ಜುನ್ ಹಾಗೂ ಹಿಂದೂ ಮಹಾಸಭಾದ ಅಧ್ಯಕ್ಷ ಶ್ರೀನಿವಾಸ ಉಪಸ್ಥಿತರಿದ್ದರು.

Leave a Reply

comments

Related Articles

error: