ಮೈಸೂರು

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಸಮಾವೇಶ ನ.11ರಂದು

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರ ಮಟ್ಟದ ಸಮಾವೇಶವನ್ನು ನವೆಂಬರ್ 11ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.
ಅವರು ನಗರದಲ್ಲಿ ಪತ್ರಕರ್ತರ ಭವನದಲ್ಲಿ ಅ.18ರಂದು ಸುದ್ದಿಗೋಷ್ಠಿ ನಡೆಸಿ, ನ.11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆಯನ್ನು ಆಯೋಜಿಸಲಾಗುವುದು. ದೇಶಾದ್ಯಂತ ಸುಮಾರು ಎರಡು ಲಕ್ಷ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುವರು. ಮೈಸೂರಿನ ಭಾಗದ ಎರಡು ಸಾವಿರ ಕಾರ್ಯಕರ್ತರು ಈಗಾಗಲೇ ಸಕ್ರಿಯರಾಗಿದ್ದಾರೆ. ಅಧಿವೇಶನದಂಗವಾಗಿ ನ.10ರಂದು ಬೆಂಗಳೂರಿನ ಕಾನಿಷ್ಕ ಹೋಟೆಲ್ ನಲ್ಲಿ ಭಾರತದ ಎಲ್ಲಾ ರಾಜ್ಯಗಳ ಅಧ್ಯಕ್ಷರ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ನಡೆಸಿ ರಾಷ್ಟ್ರಮಟ್ಟದ ವಿಚಾರಗಳನ್ನು ಚರ್ಚಿಸಿ 2017ರಲ್ಲಿ ಆರು ರಾಜ್ಯಗಳ ಹಾಗೂ 2018ರಲ್ಲಿ ರಾಜ್ಯದಲ್ಲಿ ಜರುಗುವ ವಿಧಾನಸಭಾ ಚುನಾವಣೆಯ ಕಾರ್ಯತಂತ್ರ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಸರ್ಕಾರವು ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಿ ರೈತರ ಭೂಮಿಯನ್ನು ಕಬಳಿಸುತ್ತಿದ್ದು ಇದಕ್ಕೆ ವಿರೋಧವಿದ್ದು ವಸತಿರಹಿತರಿಗೆ ವಸತಿ ಹಾಗೂ ಭೂ ರಹಿತರಿಗೆ ಭೂಮಿಯನ್ನು ಸರ್ಕಾರ ನೀಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಂಗಸ್ವಾಮಿ, ರಾಜ್ಯ ಉಪಾಧ್ಯಕ್ಷ ವೆಂಕಟೇಶ್, ಜಿಲ್ಲಾ ಘಟಕದ ಡಾ.ಮಧು ಹಾಗೂ ಇತರರು ಹಾಜರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತವಿರೋಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿವಾದಿ, ದಲಿತ ವಿರೋಧಿ. ದಲಿತರು ಉನ್ನತ ಸ್ಥಾನಕ್ಕೇರಬಾರದು ಎನ್ನುವ ದುರುದ್ದೇಶದಿಂದ ಮುಖ್ಯಮಂತ್ರಿಯಾಗಿನಿಂದಲೂ ಕುತಂತ್ರಗಳನ್ನು ಹೆಣೆಯುತ್ತಲೇ ಇದ್ದಾರೆ ಇದೇ ಕಾರಣಕ್ಕೆ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಸಚಿವ ಸಂಪುಟದಿಂದ ಕೈ ಬಿಟ್ಟಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಕಿಡಿಕಾರಿದರು.
ಅವರು, ಶ್ರೀನಿವಾಸ ಪ್ರಸಾದ್ ಆರೋಗ್ಯ ಸರಿ ಇಲ್ಲವೆಂದು ಕುಂಟು ನೆಪ ಹೇಳಿ ಸಚಿವ ಸಂಪುಟದಿಂದ ಕೈಬಿಟ್ಟಿರುವುದು ಖಂಡನೀಯ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಿನಿಂದಲೂ ಶ್ರೀನಿವಾಸ ಪ್ರಸಾದ್ ಗೆ ಮೈಸೂರು ವಿಭಾಗದಲ್ಲಿರುವ ಅಭೂತಪೂರ್ವ ಬೆಂಬಲವನ್ನು ಮನಗಂಡು ಅವರನ್ನು ವ್ಯವಸ್ಥಿತವಾಗಿ ತುಳಿಯಲು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಇದೇ ನಿಟ್ಟಿನಲ್ಲಿ ಹಿರಿಯ ಐಎಎಸ್ ಅಧಿಕಾರಿ ರತ್ನ ಪ್ರಭಾ ಅವರನ್ನು ಮೂಲೆಗುಂಪಾಗಿಸಿದ್ದಾರೆ. ದಲಿತರು ಉನ್ನತ ಸ್ಥಾನದಲ್ಲಿರಬಾರದು ಎನ್ನುವ ದೂರಾಲೋಚನೆ ಅವರದು ಎಂದು ಲೇವಡಿ ಮಾಡಿದರು.
ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಒಂದೆ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದು ಆ ಪಕ್ಷಗಳೊಂದಿಗೆ ಗುರುತಿಸಿಕೊಳ್ಳದಂತೆ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಕೋರಿ ಪಕ್ಷಕ್ಕೆ ಸೇರ್ಪಡೆಯಾಗಲೂ ಆಹ್ವಾನ ನೀಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳಿಗೆ ಪೂರಕವಾಗಿರುವ ದಲಿತರ ಮುಂದಾಳತ್ವದ ಯಾವುದೇ ಪಕ್ಷಕ್ಕೆ ಸೇರ್ಪಡೆಯಾದರೂ ಪಕ್ಷವೂ ಬೆಂಬಲವಾಗಿ ನಿಲ್ಲುವುದು. ಈ ಬಗ್ಗೆ ಅವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ವಾದಿಯಾಗಿ ಅವರ ವಿಚಾರ ಹಾಗೂ ರಾಜಕೀಯ ಚಿಂತನೆಗಳನ್ನು ಮುನ್ನಡೆಸುವ ಮುತ್ಸದ್ಧಿತನ ಶ್ರೀನಿವಾಸ ಪ್ರಸಾದ್ ಅವರಿಗಿದ್ದು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಿಳಿಸಿದರು.

Leave a Reply

comments

Related Articles

error: