ಕರ್ನಾಟಕ

ಕಾಂಗ್ರೆಸ್ ಸರಕಾರದಿಂದ ರಾಜ್ಯದಲ್ಲಿ ದುರಾಡಳಿತ : ಬಿಜೆಪಿ ಮಹಿಳಾ ಮೋರ್ಚಾ ಆರೋಪ

ಮಡಿಕೇರಿ, ಜು.25 : ರಾಜ್ಯದ ಕಾಂಗ್ರೆಸ್ ಸರಕಾರ ಆಡಳಿತದ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಸಹ ವಕ್ತಾರರಾದ ಸುಲೋಚನ ಭಟ್ ಆರೋಪಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಮಹಿಳಾ ಮೊರ್ಚ ಸಭೆ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಂದು ರಾಜ್ಯದಲ್ಲಿ ನಡೆಯುತ್ತಿರುವ ಅವ್ಯವಹಾರ, ಅನಾಚಾರಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಅವರಿಗೆ ದೊರಕುತ್ತಿರುವ ಆತಿಥ್ಯವನ್ನು ಗಮನಿಸಿದರೆ ಮುಖ್ಯಮಂತ್ರಿಗಳಿಗೆ ರಾಜ್ಯದ ಮೇಲಿರುವ ಕಾಳಜಿಯನ್ನು ತೋರುತ್ತದೆ.  ಬಿ.ಸಿ.ರೋಡ್‍ನ ಶರತ್ ಹತ್ಯೆಯನ್ನು ನಿರ್ಲಕ್ಷಿಸಿ ಕಾಂಗ್ರೆಸ್ ಸಮಾವೇಶವನ್ನು ನಡೆಸಿರುವ ರಾಜ್ಯ ಕಾಂಗ್ರೆಸ್ಸಿಗರ ಮನೋಸ್ಥಿತಿ ಎಂತಹದು ಎನ್ನುವುದು ಬಹಿರಂಗವಾಗಿದೆ ಎಂದು ಟೀಕಿಸಿದ ಸುಲೋಚನಾ ಭಟ್, ಮಹಿಳೆಯರ ಹಾಗೂ ಹಿರಿಯ ಅಧಿಕಾರಿಗಳ ಮೇಲಿನ ದೌರ್ಜನ್ಯವನ್ನು ತಡೆಯುವಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುತ್ತಿರುವ ಸರಕಾರ ಕೋಮು ಗಲಭೆಯನ್ನು ನಿಯಂತ್ರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನಮನ ಮುಟ್ಟವಂತಹ ಕೆಲಸವನ್ನು ಮಾಡುತ್ತಿದ್ದು, ದೇಶದಲ್ಲಿ ದೊಡ್ಡ ರೀತಿಯ ಬದಲಾವಣೆಯಾಗುತ್ತಿದೆ ಎಂದು ಸುಲೋಚನಾ ಭಟ್ ತಿಳಿಸಿದರು.

ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷರಾದ ಯಮುನಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಗೀತಾ ಪವಿತ್ರ, ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಕವಿತಾ ಬೆಳ್ಯಪ್ಪ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ನಳಿನಿ ಗಣೇಶ್, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾದ ಸುಮಿ ಸಬ್ಬಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಾಂತಿ ಸತೀಶ್, ಪ್ರಮುಖರಾದ ಭಾರತಿ ರಮೇಶ್, ರಾಜ್ಯ ಸಮಿತಿ ಸದಸ್ಯರಾದ ಸುಮಾಸುದೀಪ್,  ಉಪಸ್ಥಿತರಿದ್ದರು. ಇದೇ ಸಂದರ್ಭ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅವರಣದಲ್ಲಿ ಗಿಡ ನೆಡುವುದರ ಮೂಲಕ ವನಮಹೊತ್ಸವವನ್ನು ಆಚರಿಸಲಾಯಿತು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: