ದೇಶಪ್ರಮುಖ ಸುದ್ದಿ

ಮುಂದಿನ ಆದೇಶದವರೆಗೆ ಪ್ರತಿದಿನ ಎರಡು ಸಾವಿರ ಕ್ಯೂಸೆಕ್ ನೀರು ಬಿಡಿ: ಸುಪ್ರೀಂ

index-webಮುಂದಿನ ಆದೇಶದವರೆಗೂ ಪ್ರತಿ ದಿನ 2 ಸಾವಿರ ಕ್ಯೂಸೆಕ್ ನೀರನ್ನು ಹರಿಸಬೇಕೆಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರಕಾರಕ್ಕೆ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಅ.19ಕ್ಕೆ ಮುಂದೂಡಿದ್ದು, ಎರಡೂ ರಾಜ್ಯಗಳೂ ಕೂಡ ಶಾಂತಿ, ಸೌಹಾರ್ದತೆ ಕಾಪಾಡುವಂತೆ ಸಿಎಂಗಳಿಗೆ ಸೂಚಿಸಿ ಎಂದು ಜನರಲ್ ಅಡ್ವೊಕೇಟ್‍ಗಳಿಗೆ ಸೂಚನೆ ನೀಡಿದೆ.

ಕಾವೇರಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ಉದಯ್ ಲಲಿತ್ ಹಾಗೂ ನ್ಯಾ.ಅಮಿತ್ ರಾಯ್  ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು.

ಕರ್ನಾಟಕದ ರಾಜ್ಯದ ವಾಸ್ತವ ಸ್ಥಿತಿಯ ಬಗ್ಗೆ ಫಾಲಿ ನಾರಿಮನ್ ಸುಪ್ರೀಂ ಕೋರ್ಟ್‍ನಲ್ಲಿ ಸುಮಾರು 20 ನಿಮಿಷಗಳ ಕಾಲ ವಾದ ಮಂಡಿಸಿದ್ದರು. ಅ.7ರಿಂದ 18ರವರೆಗೂ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ. ಕರ್ನಾಟಕದಲ್ಲಿ ಈಗ ಮಳೆಯೂ ಇಲ್ಲ, ನೀರಿನ ಸಂಗ್ರಹವೂ ಇಲ್ಲ. ಮತ್ತೆ ನೀರು ಬಿಡುವುದು ಕಷ್ಟ ಎಂದು ಹೇಳಿದ್ದರು. ಕೇರಳ ಕೂಡ ಕರ್ನಾಟಕದ ವಾದವನ್ನು ಬೆಂಬಲಿಸಿತ್ತು. ಆದರೆ, ತಮಿಳುನಾಡು ಸರಕಾರ ಮಾತ್ರ ಈಗ ಬಿಟ್ಟಿರುವ ನೀರು ಸಾಲಲ್ಲ. ಇನ್ನಷ್ಟು ನೀರು ಬೇಕೆಂದು ವಾದ ಮಂಡಿಸಿತ್ತು.

ಕೇಂದ್ರ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದ ಮಂಡಿಸಿ, ಕಾವೇರಿ ನಿರ್ವಹಣಾ ಮಂಡಳಿ ರಚನೆ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಇದು ಶಾಸಕಾಂಗದ ಜವಾಬ್ದಾರಿಯಾಗಿದೆ. ಈ ಬಗ್ಗೆ ದಾಖಲೆಗಳನ್ನು ಕೂಡ ಸಲ್ಲಿಸುತ್ತೇನೆ. ಕೇಂದ್ರ ಉನ್ನತಾಧಿಕಾರದ ತಂಡದ ವರದಿಯನ್ನು ಕೂಡ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದಿದ್ದರು.

ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಿದ್ಧಪಡಿಸಿದ ವರದಿಯನ್ನು ಕೇಂದ್ರ ಉನ್ನತ ಮಟ್ಟದ ತಾಂತ್ರಿಕ ಸಮಿತಿ ಸೋಮವಾರ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ ನೇತೃತ್ವದ 9 ಸದಸ್ಯರ ಸಮಿತಿ ಉಭಯ ರಾಜ್ಯಗಳ ಅಚ್ಚುಕಟ್ಟು ಪ್ರದೇಶಗಳಿಗೆ ಭೇಟಿ ನೀಡಿ, ವಸ್ತುಸ್ಥಿತಿಯನ್ನು ಅಧ್ಯಯನ ಮಾಡಿ 39 ಪುಟಗಳ ವರದಿ ಸಲ್ಲಿಸಿದ್ದು, ಇದರಲ್ಲಿ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಸಾಲುಸಾಲು ಸೋಲುಂಡ ಕರ್ನಾಟಕಕ್ಕೆ ಕೇಂದ್ರದ ತಜ್ಞರ ತಂಡ ಸಲ್ಲಿಸಿದ ವರದಿಯು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿತ್ತಾದರೂ, ಮತ್ತೆ ನೀರು ಬಿಡಲು ಆದೇಶಿಸಿದ ಹಿನ್ನೆಲೆಯಲ್ಲಿ ಬರಸಿಡಿಲು ಬಡಿದಂತಾಗಿದೆ.

 

Leave a Reply

comments

Related Articles

error: