ಮೈಸೂರು

ಜೆಎಸ್ಎಸ್ ಸಂಸ್ಥೆಗಳು ಸೇವಾ ಮಾದರಿಯ ಶಿಕ್ಷಣವನ್ನು ನೀಡುತ್ತಿವೆ : ಪ್ರೊ.ಕೆ.ಎಸ್.ರಂಗಪ್ಪ

“ಇಂದು ಕೆಲವು ಶೈಕ್ಷಣಿಕ ಸಂಸ್ಥೆಗಳು ಕೇವಲ ವ್ಯಾವಹಾರಿಕವಾಗಿ ಹಣ ಗಳಿಕೆಯ ಉದ್ದೇಶದಿಂದ ಸ‍ಂಸ್ಥೆಗಳನ್ನು ನಡೆಸುತ್ತಿರುವ ಕಾಲದಲ್ಲಿ ಜೆಎಸ್ಎಸ್ ಸಂಸ್ಥೆಗಳು ಸಮಾಜಕ್ಕೆ ಮೌಲ್ಯಯುತವಾದ ಶಿಕ್ಷಣವನ್ನು ಸೇವಾ ಮನೋಭಾವದಿಂದ ನೀಡುತ್ತಾ  ಮುನ್ನಡೆಯುತ್ತಿರುವುದು ಅಭಿಮಾನದ ಸಂಗತಿ “ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ ಅಭಿಪ್ರಾಯಪಟ್ಟರು.

ಬಿ.ಎನ್ ರಸ್ತೆಯ ಜೆಎಸ್ಎಸ್ ಕಾಲೇಜಿನಲ್ಲಿ ಅ.18 ರಂದು ಏರ್ಪಡಿಸಿದ್ದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಮತ್ತು ಪರಿಚಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಕೆ.ಎಸ್.ರಂಗಪ್ಪ ಅವರು ಮಾತನಾಡುತ್ತಾ, ಸೇವಾ ಹಿನ್ನೆಲೆಯಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಿಕೊಂಡು ಬರುವುದು ಕಷ್ಟ. ಆದರೂ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು 12 ಸ್ನಾತಕೋತ್ತರ ಮತ್ತು 7 ಸಂಶೋಧನಾ ಕೇಂದ್ರಗಳ ಜೊತೆಗೆ ಕೌಶಲ್ಯ ಆಧಾರಿತ ಕೋರ್ಸ್ ಗಳನ್ನು ಸಹ ನಡೆಸುತ್ತಿರುವುದು ಒಂದು ವಿಶ್ವವಿದ್ಯಾಲಯ ಕಾರ್ಯವ್ಯಾಪ್ತಿಯನ್ನು ಪ್ರತಿನಿಧಿಸುವಂತೆ ಇದೆ” ಎಂದು ಹೇಳಿದರು.

ಮುಂದುವರೆದು ಮಾತನಾಡುತ್ತಾ, ”ಪ್ರಸ್ತುತ ಕಾಲೇಜು ಉನ್ನತ ಶಿಕ್ಷಣಕ್ಕೆ ಪೂರಕವಾದ ಸುಸಜ್ಜಿತವಾದ ಗ್ರಂಥಾಲಯ, ಪ್ರಯೋಗಾಲಯಗಳು ಮತ್ತು ಅನುಭವಿ ಅಧ್ಯಾಪಕ ವೃಂದವನ್ನು ಹೊಂದಿದ್ದು, ಗುಣಾತ್ಮಕ ಶಿಕ್ಷಣಕ್ಕೆ ಪೂರಕವಾದ ವಾತಾವರಣವಿದೆ. ಶೈಕ್ಷಣಿಕ ಗುಣಮಟ್ಟದಲ್ಲಿ ಇದುವರೆಗೂ ಯಾವುದೇ  ರೀತಿಯ ರಾಜಿಯನ್ನು ಮಾಡಿಕೊಳ್ಳದೇ ಅತ್ಯುನ್ನತ ಮಟ್ಟದಲ್ಲಿದ್ದು, ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಮಾದರಿಯಾಗಿದೆ” ಎಂದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಪ್ರಾಂಶುಪಾಲ ಪ್ರೊ. ಎಂ.ಮಹದೇವಪ್ಪ, ವಾಣಿಜ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಎಚ್.ಸಿ.ಹೊನ್ನಪ್ಪ ಮತ್ತು ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಎಂ.ಪಿ.ಸೋಮಶೇಖರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Leave a Reply

comments

Related Articles

error: