ಕರ್ನಾಟಕಪ್ರಮುಖ ಸುದ್ದಿ

ಶೀಘ್ರದಲ್ಲೇ ಇಂಧನ ಇಲಾಖೆಯ 9 ಸಾವಿರ ಹುದ್ದೆ ಭರ್ತಿ ಮಾಡಲಾಗುವುದು : ಸಚಿವ ಡಿ.ಕೆ. ಶಿವಕುಮಾರ್

ಮೈಸೂರು, ಜುಲೈ 26 : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ 5000 ಮೆಗ ವ್ಯಾಟ್ ಹೆಚ್ಚುವರಿ ವಿದ್ಯುತ್ ಸೇರ್ಪಡೆಯಾಗಿದೆ ಎಂದು ಇಂಧನ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕರ್ನಾಟಕ ಕಲಾ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಇಂಧನ ಇಲಾಖೆಯಲ್ಲಿ ಹೊಸದಾಗಿ ನೇಮಕಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 10 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಇದೆ. ಇನ್ನೊಂದು ವರ್ಷದಲ್ಲಿ ನಾವು ವಿದ್ಯುಚ್ಛಕ್ತಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುತ್ತೇವೆ. ಗ್ರಾಹಕರಿಗೆ, ಕೈಗಾರಿಕೆಗಳಿಗೆ, ವಿದ್ಯಾರ್ಥಿಗಳಿಗೆ ಲೋಡ್‍ಶೆಡ್ಡಿಂಗ್‍ನಿಂದ ತೊಂದರೆಯಾಗಿದೆ ಎಂಬ ಆರೋಪ ಬರದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ಬರ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗೃತೆಯಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 1000 ಮೆ.ವ್ಯಾ. ವಿದ್ಯುತ್ ಪಡೆಯಲು ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಹಿಂದೆ 1 ಯೂನಿಟ್ ವಿದ್ಯುತ್‍ಗೆ 13 ರೂ.ಗಳ ವರೆಗೂ ಖರ್ಚು ಮಾಡುತ್ತಿದ್ದರು. ನಾವು ಈ ಮೊತ್ತವನ್ನು 5.5 ರೂ.ಗೆ ಇಳಿಸಿದ್ದೇವೆ. ಈ ಮೊತ್ತ ಇನ್ನೂ ಕಡಿಮೆಯಾಗಲಿದೆ ಎಂದು ಹೇಳಿದರು.

ಇಲಾಖೆಯಲ್ಲಿ 55 ಸಾವಿರ ಮಂಜೂರಾದ ಹುದ್ದೆಗಳಿವೆ. ಈ ಪೈಕಿ 30 ಸಾವಿರ ಹುದ್ದೆ ನಾವು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಖಾಲಿ ಇತ್ತು. ನಾವು 22 ಸಾವಿರ ಹುದ್ದೆಗಳನ್ನು ಅತ್ಯಂತ ಪಾರದರ್ಶಕವಾಗಿ ಭರ್ತಿ ಮಾಡಿದ್ದೇವೆ. ಇನ್ನೂ ಸುಮಾರು 9 ಸಾವಿರ ಹುದ್ದೆ ಭರ್ತಿ ಮಾಡುವ ಉದ್ದೇಶ ಇದೆ ಎಂದರು.

ವಿಶ್ವದ 80 ವಿದ್ಯುತ್ ಸರಬರಾಜು ಕಂಪನಿಗಳ ಪೈಕಿ ಅತ್ಯುತ್ತಮ 10 ಕಂಪನಿಗಳಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಒಂದು. ದೇಶದ ಅತಿ ದೊಡ್ಡ ಕಂಪನಿಗಳಲ್ಲಿ ಸೆಸ್ಕ್ 3ನೇ ಸ್ಥಾನ ಪಡೆದಿದೆ ಎಂದರು.

ನೌಕರರ ಕಾರ್ಯದಕ್ಷತೆ ಹಾಗೂ ಸ್ಪರ್ಧಾತ್ಮಕತೆ ಹೆಚ್ಚಿಸುವ ಉದ್ದೇಶದಿಂದ ಅತ್ಯುತ್ತಮ ಸೇವೆ ನೀಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸುವ ಯೋಜನೆಯನ್ನು ಈ ವರ್ಷದಿಂದ ಆರಂಭಿಸುವ ಉದ್ದೇಶ ಇದೆ. ನೌಕರರ ಧ್ವನಿ ಕೇಳಲು ಇಂಜಿನಿಯರ್ ಸಂಘದ ಅಧ್ಯಕ್ಷ ಹಾಗೂ ನೌಕರರ ಸಂಘದ ಅಧ್ಯಕ್ಷರನ್ನು ಆಡಳಿತ ಮಂಡಳಿಯ ಸದಸ್ಯರನ್ನಾಗಿ ಮಾಡಿಕೊಂಡಿರುವ ಸರ್ಕಾರ ನಮ್ಮದು ಎಂದು ಹೇಳಿದರು.

ಸ್ಮಾರ್ಟ್ ಗ್ರಿಡ್ ಯೋಜನೆ ಇತರ ಕಂಪನಿಗಳಿಗೂ ವಿಸ್ತರಣೆ :

ವಿದ್ಯುತ್ ಬಳಕೆಯ ಅಪವ್ಯಯ ತಪ್ಪಿಸಲು ಕೇಂದ್ರ ಸರ್ಕಾರ ಸ್ಮಾರ್ಟ್ ಗ್ರಿಡ್ ಯೋಜನೆಯನ್ನು ದೇಶದ ಸುಮಾರು 15 – 16 ಕಂಪನಿಗಳಿಗೆ ಪೈಲಟ್ ಯೋಜನೆಯಾಗಿ ನೀಡಿತ್ತು. ಇತರ ರಾಜ್ಯಗಳು ಈ ಯೋಜನೆ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಸೆಸ್ಕ್ ಕಂಪನಿಯು ಮೈಸೂರಿನ 25 ಸಾವಿರ ಮನೆಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ, ಯಶಸ್ವಿಯಾಗಿ ಅನುಷ್ಟಾನ ಮಾಡಿದೆ. ಇತರ ಕಂಪನಿಗಳಿಗೂ ಯೋಜನೆ ವಿಸ್ತರಿಸಲಾಗುವುದು ಎಂದರು.

ರೈತರ ಪಂಪ್ ಸೆಟ್‍ಗಳಿಗೆ ವಾರ್ಷಿಕ 50 ರಿಂದ 70 ಸಾವಿರ ರೂ. ಖರ್ಚು ಮಾಡಿ ವಿದ್ಯುತ್ ಸರಬರಾಜು ಮಾಡುತ್ತಿದ್ದೇವೆ. ಪಾವಗಡದಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ಮಾಡಿದ್ದೇವೆ. ಸುಮಾರು 120  ತಾಲ್ಲೂಕಿನಲ್ಲಿ 20 ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಪಾರ್ಕ್ ಮಾಡುವ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ ಎಂದರು.

ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ತನ್ವೀರ್ ಸೇಠ್, ಶಾಸಕರಾದ ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ನಿಗಮ ಮಂಡಳಿ ಅಧ್ಯಕ್ಷರುಗಳಾದ ಹೆಚ್. ಎ. ವೆಂಕಟೇಶ್, ಸೀತಾರಾಮ್, ಮಲ್ಲಿಗೆ ವೀರೇಶ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

-ಎನ್.ಬಿ.

Leave a Reply

comments

Related Articles

error: