ಪ್ರಮುಖ ಸುದ್ದಿಮೈಸೂರು

ಮೈಸೂರು ಮಹಾನಗರ ಪಾಲಿಕೆಯಲ್ಲಿ ‘ಕಸ’ದ ಗದ್ದಲ

ವಿವಿಧ ವಿಷಯಗಳ ಗದ್ದಲಕ್ಕೆ ವೇದಿಕೆಯಾಗುತ್ತಿದ್ದ ಪಾಲಿಕೆ ಮಂಗಳವಾರ ಕಸದ ಗದ್ದಲಕ್ಕೆ ಕಾರಣವಾಯಿತು. ಸಭೆಯ ಆರಂಭದಿಂದಲೂ ಬರೀ ಕಸದ ಮಾತು, ಕಸದ ಗದ್ದಲ.

ಮಂಗಳವಾರ ಪಾಲಿಕೆಯಲ್ಲಿ ಮೇಯರ್ ಬಿ.ಎಲ್.ಭೈರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆ ಅಕ್ಷರಶಃ ರಣರಂಗದಂತಾಗಿತ್ತು. ಸಭೆ ಆರಂಭಗೊಳ್ಳುತ್ತಲೆ ಒಬ್ಬರ ಮೇಲೊಬ್ಬರಂತೆ ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದರು. ಅದರಲ್ಲೂ ದೇಶದಲ್ಲಿ ಸ್ವಚ್ಛ ನಗರಿ ಎಂದು ಬಿರುದು ಪಡೆದಿರುವ ನಗರದ ಸ್ವಚ್ಛತೆ ಹಾಗೂ ಕಸದ ಬಗ್ಗೆ ಹಲವು ದೂರುಗಳು ಕೇಳಿ ಬಂದವು.

ಮೇಯರ್ ಬಿ.ಎಲ್.ಭೈರಪ್ಪ ಅವರು ವಿದ್ಯಾರಣ್ಯಪುರಂನಲ್ಲಿರುವ ಸುಯೇಜ್ ಫಾರಂ ಕಸ ಸಂಸ್ಕರಣಾ ಘಟಕದ ಟೆಂಡರನ್ನು ಈಗಾಗಲೇ ಮೂರು ಬಾರಿ ಕರೆಯಲಾಗಿದೆ. ಆದರೆ, ಐಎಲ್ ಅಂಡ್ ಎಫ್‌ಎಸ್ ಸಂಸ್ಥೆ ಹೊರತಾಗಿ ಮತ್ತಾರು ಟೆಂಡರ್ ಹಾಕಿಲ್ಲ. ಅಲ್ಲದೆ 5 ವರ್ಷದ ಗುತ್ತಿಗೆ ನೀಡಬೇಕು. ಮತ್ತೆ ಕಾರ್ಯ ಮುಂದುವರೆಸಲು ಯಂತ್ರೋಪರಕರಣಗಳನ್ನು ದುರಸ್ತಿ ಕಾರ್ಯ ಮಾಡಿ ಕೊಡಬೇಕು. ಅಲ್ಲದೆ ನೂತನ ಯಂತ್ರೋಪಕರಣ ಅಳವಡಿಸಲು ಕನಿಷ್ಠ 2 ವರ್ಷ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಗರಪಾಲಿಕೆ ಸದಸ್ಯ ಆಯೂಬ್‌ಖಾನ್, ರಮೇಶ್ ಈಗಾಗಲೇ ಈ ಕಂಪನಿ ಕಾನೂನುಗಳನ್ನು ಗಾಳಿಗೆ ತೂರಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಇದರಿಂದ ವಿದ್ಯಾರಣ್ಯಪುರಂ ಘಟಕದ ಸುತ್ತಮುತ್ತ ವಾಸನೆ ದುರ್ನಾತ ಬೀರುತ್ತಿದೆ. ಹಾಗಾಗಿ ಬೇರೆಯವರಿಗೆ ಟೆಂಡರ್ ನೀಡಿ ಎಂದು ಪರಿಸರವಾದಿಗಳು ಹಾಗೂ ನಗರಪಾಲಿಕೆ ತಜ್ಞರ ಸಮಿತಿ ವರದಿ ನೀಡಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಮತ್ತೇ ಇದೇ ಕಂಪನಿಗೆ ಟೆಂಡರ್ ನೀಡಬಾರದೆಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ನಗರಪಾಲಿಕೆ ಸದಸ್ಯ ನಂದೀಶ್ ಪ್ರೀತಂ ಸ್ವಚ್ಛ ನಗರಿಯ ಬಿರುದು ಬಂದ ಬಳಿಕ ಈಗಾಗಲೇ ಪ್ರತಿ ವಾರ್ಡ್‌ನ ಕಸವನ್ನು ಆಯಾ ವಾರ್ಡ್‌ನಲ್ಲೇ ವಿಂಗಡಿಸಲು ಪ್ಲಾಂಟ್ ಮಾಡಲಾಗಿದೆ. ಅಲ್ಲಿಯೇ ಕಸ ವಿಂಗಡಣೆಗೆ ಅವಕಾಶ ನೀಡಿ, ಆಗ ವಿದ್ಯಾರಣ್ಯ ಪುರಂನಲ್ಲಿ 2೦೦ ಟನ್ ಕಸ ಹೇಗೆ ಬೀಳುತ್ತದೆ? ಈ ಸ್ವಚ್ಛ ನಗರಿಯ ವಿಚಾರದಲ್ಲಿ ಮೇಯರ್, ಆಯುಕ್ತರು ವಿಫಲರಾಗಿದ್ದಾರೆ. ಅದಕ್ಕಾಗಿಯೇ ಸರಿಯಾಗಿ ಕಸ ವಿಂಗಡಣೆಗೆ ಸಂಬಂಧಿಸಿದಂತೆ ಸರಿಯಾದ ಮಾರ್ಗದರ್ಶನ ರೂಪಿಸಿಲ್ಲವೆಂದು ಕಿಡಿ ಕಾರಿದರು.

ಅಲ್ಲದೆ, ನಗರದಲ್ಲಿ 9 ಕಸ ಸಂಸ್ಕರಣಾ ಘಟಕಗಳು ಕೆಟ್ಟು ನಿಂತಿವೆ. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಹಾಗೆಯೇ ಉಳಿದಿದೆ. 7 ಕಸ ಸಂಸ್ಕರಣಾ ಘಟಕಗಳು ಕಾರ್ಯ ನಿರ್ವಹಿಸದೇ ಕೆಟ್ಟು ನಿಂತಿರುವುದರಿಂದ ಸುಯೇಜ್ ಫಾರಂನಲ್ಲಿ ಬೆಟ್ಟದಷ್ಟು ಕಸದ ರಾಶಿ ಬಿದ್ದಿದೆ. ಹಾಗಾಗಿ , ಈ ಕುರಿತು ಸರಿಯಾಗಿ ತೀರ್ಮಾನ ಕೈಗೊಳ್ಳಿ ಎಂದು ಒತ್ತಾಯಿಸಿದರು. ಇದಕ್ಕೆ ದನಿ ಗೂಡಿಸಿ ಆರ್. ಲಿಂಗಪ್ಪ, ಎಂ.ಕೆ ಸುಂದರ್, ರವಿಕುಮಾರ್ ಕಸ ನಿರ್ವಹಣೆಗೆಂದೇ 18 ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳು ಕಾರಿನಲ್ಲಿ ತಿರುಗಾಡುತ್ತಾರೆ ಹೊರತು ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಸಮಸ್ಯೆ ಉದ್ಭವಿಸಿದೆ ಎಂದರು.

15 ದಿನದಲ್ಲಿ ಮತ್ತೆ ಟೆಂಡರ್: ಸುದೀರ್ಘ ಚರ್ಚೆಯ ಬಳಿಕ ಬಳಿಕ ನಿರ್ಣಯ ಕೈಗೊಂಡ ಮೇಯರ್ ಬಿ.ಎಲ್.ಭೈರಪ್ಪ ಹದಿನೈದು ದಿನಗಳಲ್ಲಿ ಮತ್ತೆ ಟೆಂಡರ್ ಕರೆಯಲಾಗುವುದು. ಯಾರೂ ಅರ್ಜಿ ಸಲ್ಲಿಸದಿದ್ದರೆ, ಸದರಿ ಅರ್ಜಿ ಸಲ್ಲಿಸುವ ಕಂಪನಿಗೆ ಮುಂದುವರೆಸಲು ನಗರಪಾಲಿಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು. ವಿರೋಧದ ನಡುವೆಯೂ ಮೇಯರ್ ಆದೇಶಕ್ಕೆ ಮನ್ನಣೆ ದೊರೆಯಿತು.

ಮಾರುಕಟ್ಟೆ ಪುನರ್ ನಿರ್ಮಾಣ: ಇನ್ನು ದೇವರಾಜ ಮಾರುಕಟ್ಟೆ ಪುನರ್ ನಿರ್ಮಾಣಕ್ಕೆ ನಗರಪಾಲಿಕೆಯಲ್ಲಿ ಒಮ್ಮತ ತೀರ್ಮಾಣ ಕೈಗೊಳ್ಳಲಾಯಿತು. ಆದರೆ, ನಗರಪಾಲಿಕೆ ಸದಸ್ಯ ರವಿಕುಮಾರ್, ನಂದೀಶ್ ಪ್ರೀತಂ ಆಕ್ಷೇಪ ವ್ಯಕ್ತಪಡಿಸಿ ವ್ಯಾಪಾರಿಗಳ ಜೀವನಕ್ಕೆ ತೊಂದರೆಯಾಗುವ ನಿಟ್ಟಿನಲ್ಲಿ ಹಂತ ಹಂತವಾಗಿ ನವೀಕರಣ ಸಾಧ್ಯವೆ ಎಂದು ಪರಿಶೀಲಿಸುವಂತೆ ಆಗ್ರಹಿಸಿದರು. ಅಲ್ಲದೆ, ಯಾವುದೇ ಕಾರಣಕ್ಕೂ ದೇವರಾಜ ಮಾರುಕಟ್ಟೆಯಲ್ಲಿ ಈಗ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ತೊಂದರೆಯಾಗದ ರೀತಿ ವ್ಯವಸ್ಥೆ ಕಲ್ಪಿಸಿ ಅನಂತರ ನಿರ್ಮಾಣ ಕಾರ್ಯ ನಡೆಸಿ. ಅಲ್ಲದೆ, ನವೀಕೃತ ಕಟ್ಟಡದಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಮಾತ್ರ ಮುಂದೆಯೂ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಕೊನೆಗೆ ವ್ಯಾಪಾರಸ್ಥರನ್ನು ಪರಿಗಣನೆಗೆ ತೆಗೆದುಕೊಂಡು ತಜ್ಞರ ವರದಿ ಆಧರಿಸಿ ದೇವರಾಜ ಮಾರುಕಟ್ಟೆ ಪುನರ್ ನವೀಕರಣ ಮಾಡುವುದಾಗಿ ಮೇಯರ್ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಉಪ ಮೇಯರ್ ವನಿತಾ ಪ್ರಸನ್ನ, ಆಯುಕ್ತ ಜಗದೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

comments

Related Articles

error: