ಮೈಸೂರು

ಕಡಲೆಕಾಯಿ ವ್ಯಾಪಾರ ಮಾಡುತ್ತಲೇ ಕಾವೇರಿಗಾಗಿ ಹೋರಾಟ…

ಕಾವೇರಿ ಉಳಿವಿಗಾಗಿ ನಿತ್ಯವೂ ಪೂಜೆ ಪುನಸ್ಕಾರ ಸೇರಿದಂತೆ ಹೋರಾಟದ ಕಿಚ್ಚು ಸಹ ಹೆಚ್ಚಾಗುತ್ತಿದೆ. ಮಂಗಳವಾರವಷ್ಟೇ, ಸುಪ್ರೀಂ ಕೂಡ ತನ್ನ ಮುಂದಿನ ಆದೇಶದ ವರೆಗೂ ತಮಿಳುನಾಡಿಗೆ ನಿತ್ಯವೂ ಎರಡು ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಿದೆ. ಆದರೆ, ‘ಕಾವೇರಿ ಉಳಿವಿಗಾಗಿ ಅಸಹಕಾರ ಚಳುವಳಿ ಅಗತ್ಯ’ ಎಂದು ಟ್ಯಾಗ್ ಲೈನ್ ಮಾಡಿಸಿ ವ್ಯಾಪಾರಿಯೊಬ್ಬರು ತಾವು ವ್ಯಾಪಾರ ಮಾಡುವ ಜಾಗದಲ್ಲೇ ಕಾವೇರಿ ಉಳಿವಿಗಾಗಿ ವಿನೂತನವಾದ ಹೋರಾಟ ಮಾಡುತ್ತಿದ್ದಾರೆ. ಅದು ರೈಲಿನಲ್ಲಿ ಕಡಲೆಕಾಯಿ ಬೀಜ ವ್ಯಾಪಾರ ಮಾಡುತ್ತ ವಿಭಿನ್ನವಾಗಿ.

ಮಕ್ಕಡಹಳ್ಳಿ ವೆಂಕಟೇಶ್ ಎಂಬವರು ಸ್ವಂತ ಹಣದಿಂದಲೇ ಪ್ರಿಂಟ್ ಮಾಡಿಸಿದ ಕರಪತ್ರ ಹಿಡಿದು ನಿತ್ಯವೂ ವ್ಯಾಪಾರ ಮಾಡುವ ಕಡೆಯಲ್ಲೆಲ್ಲ ಕಡಲೆಕಾಯಿ ಬೀಜ ಕೊಳ್ಳುವವರಿಗೆ ಕಾವೇರಿ ನೀರಿನ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಮಾತ್ರವಲ್ಲ ಕಾವೇರಿ ಹೋರಾಟಕ್ಕೆ ಧುಮುಕಿ ಅಸಹಕಾರ ಚಳುವಳಿಗೆ ಪ್ರೇರೆಪಿಸುತ್ತಿದ್ದಾರೆ. ವಿಶೇಷವೆಂದರೆ ನಮಗೆ ಸಂವಿಧಾನದ ಪ್ರಕಾರ ಎಷ್ಟು ಪ್ರಮಾಣದ ನೀರು ಲಭ್ಯವಾಗಲಿದೆ. ತಮಿಳುನಾಡಿಗೆ ಎಷ್ಟು ಪ್ರಮಾಣದ ನೀರು ಬಿಡಬೇಕು ಎಂಬುದರ ಬಗ್ಗೆಯೂ ಮಾಹಿತಿಯನ್ನು ಕೂಡ ಛಾಪಿಸಿದ್ದಾರೆ. ಸಾಮಾನ್ಯವಾಗಿ ಕಲ್ಲು-ತೂರಾಟ, ಟೈರ್‍ಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ವಾದದ ಜೊತೆಯಲ್ಲೇ ಈ ರೀತಿ ಮಾಡುತ್ತಿದ್ದಾರೆ.

ಶಾಸಕರಿಗೂ ಪತ್ರ ತಲುಪಿಸಿದ ವೆಂಕಟೇಶ್: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೆಗೌಡರು ಒಮ್ಮೆ ರೈಲಿನಲ್ಲಿ ವ್ಯಾಪಾರ ಮಾಡುವಾಗ ವೆಂಕಟೇಶ್ ಅವರನ್ನು ಮಾತಾಡಿಸಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.

ನಿತ್ಯವೂ ಸಾವಿರಾರು ಮಂದಿಗೆ ತಲುಪುತ್ತಿದೆ ಈ ಪ್ರತಿ: ನಿತ್ಯವೂ ಮೈಸೂರಿನಲ್ಲಿ ರೈಲಿನಲ್ಲಿ ಸಂಚರಿಸುತ್ತಾ ವ್ಯಾಪಾರ ಮಾಡುವ ವೆಂಕಟೇಶ್ ಅವರು ಸಾವಿರಕ್ಕೂ ಹೆಚ್ಚು ಮುದ್ರಣ ಮಾಡಿಸಿದ್ದಾರೆ. ಒಬ್ಬರಿಗೆ ಕರಪತ್ರ ನೀಡುವ ವೇಳೆ ತಾವು ಓದಿ ತಿಳಿದುಕೊಂಡ ನಂತರ ಇದನ್ನು ಬಿಸಾಡದೆ ಮತ್ತೊಬ್ಬರಿಗೆ ನೀಡಿ ಎನ್ನುವ ಮೂಲಕ ಈ ಪ್ರತಿ ಸಾವಿರಾರು ಮಂದಿಯ ಕೈ ಸೇರುವಂತೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನದಿ ಜೋಡಣೆಯ ಮೂಲಕ ಈ ಸಮಸ್ಯೆಗೆ ಅಂಕಿತ ಹಾಕುವಂತೆ, ಕಾವೇರಿ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕೆಂಬುದು ಇವರ ಬೇಡಿಕೆ.

ಗಾಂಧೀಜಿಯಂತೆ ಅಸಹಕಾರ ಚಳುವಳಿ: ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರು 1926ರಲ್ಲಿ ಅಸಹಕಾರ ಚಳುವಳಿ ಪ್ರಾರಂಭ ಮಾಡಿದ ಹಾಗೆ ನಾವು ಕೂಡ ಕಾವೇರಿ ಉಳಿವಿಗಾಗಿ ಅಸಹಕಾರ ಚಳುವಳಿ ಮಾಡುವುದು ಅನಿರ್ವಾಯವಾಗಿದೆ. ಸಾವಿರಾರು ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಮುಂದೆ ನಮ್ಮ ರೈತರನ್ನು ಉಳಿಸುವ ಸಲುವಾಗಿ, ಕಾವೇರಿಯನ್ನು ರಕ್ಷಿಸಿಸುವ ಸಲುವಾಗಿ ಈ ಹೋರಾಟ. ಸ್ವಾತಂತ್ರ್ಯಕ್ಕೂ ಮುನ್ನ ಕರ್ನಾಟಕ-ತಮಿಳುನಾಡಿನ ಮಧ್ಯೆ ನೀರಿಗಾಗಿ ಕಾದಾಟ ಶುರುವಾಗಿತ್ತು. ನಮ್ಮ ಜಾಗದಲ್ಲಿ ಬೀಳುವ ಮಳೆ ನೀರಿನ ಹಕ್ಕು ನಮ್ಮದು …. ಹೀಗೆ ಹತ್ತು ಹಲವು ಅಂಶಗಳನ್ನು ಈ ಕರಪತ್ರದಲ್ಲಿ ಮುದ್ರಿಸಿ ಕಾವೇರಿ ವಿವಾದದ ಕುರಿತು ಸಾಮಾನ್ಯ ಜನರಿಗೆ ತಿಳುವಳಿಕೆ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ವೆಂಕಟೇಶ್.

ಹೀಗಾಗಿ ಕಾವೇರಿ ನೀರು ಉಳಿಸಿಕೊಳ್ಳಲು ಎಲ್ಲರೂ ಕೈಜೋಡಿಸಬೇಕಾಗಿದೆ. ಆಗ ಕಾವೇರಿ ಉಳಿವಿಗಾಗಿ ವೆಂಕಟೇಶ್ ಅವರು ಮಾಡುತ್ತಿರುವ ಅಳಿಲು ಸೇವೆಗೊಂದು ಅರ್ಥ ಬರುತ್ತದೆ.

ಸುರೇಶ್. ಎನ್.

Leave a Reply

comments

Related Articles

error: