ಕರ್ನಾಟಕ

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕಾಮಗಾರಿ ನೀಡಿ : ದಲಿತ ಸಂಘರ್ಷ ಸಮಿತಿ ಒತ್ತಾಯ

ಮಡಿಕೇರಿ ಜು.28 :  ಸರಕಾರದ ಆದೇಶದಂತೆ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಶೇ.6.95ರಷ್ಟನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಬೇಕಿದ್ದು, ಈ ಬಗ್ಗೆ ಸರಕಾರಿ ಆದೇಶವಿದ್ದರೂ, ಕೆಲವು ಅಧಿಕಾರಿಗಳನ್ನು ಅದನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಆರ್.ಪರಶುರಾಮ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿಗ್ವಿಜಯ ಸಿಂಗ್ ಅವರು ‘ಭೋಪಾಲ್ ಘೋಷಣೆ’ ಹೆಸರಿನಲ್ಲಿ ಆ ರಾಜ್ಯದ ದಲಿತರ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಮೀಸಲಾತಿ ನಿಗದಿಪಡಿಸಿ ಕ್ರಾಂತಿಕಾರಕ ಮಸೂದೆಯನ್ನು ಜಾರಿಗೆ ತಂದಿದ್ದರು. ಇದನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕೆಂದು ದಲಿತ ಸಂಘರ್ಷ ಸಮಿತಿ ನಡೆಸಿದ ಹೋರಾಟದ ಫಲವಾಗಿ 2004-05ನೇ ಸಾಲಿನಲ್ಲಿ ಅಂದಿನ ಎಸ್.ಎಂ. ಕೃಷ್ಣ ನೇತೃತ್ವದ ಸರಕಾರ  ಮೊದಲ ಬಾರಿಗೆ ದಲಿತರಿಗೆ ಗುತ್ತಿಗೆ ಕಾಮಗಾರಿಯಲ್ಲಿ ಮೀಸಲಾತಿ ನೀಡಲು ಒಪ್ಪಿಗೆ ಸೂಚಿಸಿ ಒಂದು ಲಕ್ಷ ರೂ. ಮಿತಿಗೆ ಇದನ್ನು ಜಾರಿಗೊಳಿಸಿತ್ತು ಎಂದು ಅವರು ನೆನಪಿಸಿದರು. ಆ ನಂತರ ಬಂದ ಪಾರದರ್ಶಕ ಕಾಯ್ದೆ ಅನ್ವಯ ಗುತ್ತಿಗೆಯಲ್ಲಿ ಮೀಸಲಾತಿ ತನ್ನಿಂದ ತಾನೇ ಕೊನೆಗೊಂಡಿತ್ತಾದರೂ, ದಲಿತ ಸಂಘಟನೆಗಳ ಒತ್ತಾಯಕ್ಕೆ ಮಣಿದ ಸಿದ್ದರಾಮಯ್ಯ ಅವರು ಒಂದು ಲಕ್ಷದ ಮಿತಿಯನ್ನು 50 ಲಕ್ಷ ರೂ.ಗಳಿಗೆ ಏರಿಸಿ ಕಾನೂನು ರೂಪಿಸಿದ ಪರಿಣಾಮವಾಗಿ ರಾಜ್ಯದಲ್ಲಿ ಮತ್ತೆ ಗುತ್ತಿಗೆ ಕಾಮಗಾರಿಯಲ್ಲಿ ಮೀಸಲಾತಿ ಲಭಿಸಿದೆ. ಈ ಕಾನೂನಿಗೆ ಇತ್ತೀಚೆಗೆ ರಾಷ್ಟ್ರಪತಿಗಳೂ ಅಂಕಿತ ಹಾಕಿದ್ದಾರೆ. ಆದರೆ ಈ ಆದೇಶವನ್ನು ಕೆಲವು ಅಧಿಕಾರಿಗಳು ಕಡೆಗಣಿಸಿ ದಲಿತರಿಗೆ ವಂಚಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಈ ಕಾಯ್ದೆ ಜಾರಿಯಾಗುವಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಪರಶುರಾಮ್ ಅವರು, ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಸರಕಾರ ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಬೇಕು ಎಂದು ಪರಶುರಾಮ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಶಂಕರ, ತಾಲೂಕು ಸಂಘಟನಾ ಸಂಚಾಲಕರುಗಳಾದ ಗಣೇಶ್ ಮಾದಾಪುರ, ಕುಮಾರ್ ಸುಂಟಿಕೊಪ್ಪ ಹಾಗೂ ಸುಗಂಧಿ ಸುಂಟಿಕೊಪ್ಪ ಉಪಸ್ಥಿತರಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: