ಕರ್ನಾಟಕಪ್ರಮುಖ ಸುದ್ದಿಮೈಸೂರು

ಹಿರಿಯ ನಾಗರಿಕರಿಗೆ ವಂಚನೆ: ದಸರಾ ಅಧಿಕಾರಿಗಳ ಅಮಾನತುಗೊಳಿಸಲು ಒತ್ತಾಯ

“ಹಿರಿಯ ನಾಗರಿಕರನ್ನು ಕಡೆಯಾಗಿ ಕಾಣುವವರ ಪಟ್ಟಿಯಲ್ಲಿ ಸರ್ಕಾರಿ ಅಧಿಕಾರಿಗಳೂ ಹೊರತಲ್ಲ. ಇದಕ್ಕೆ ದಸರಾ ಕ್ರೀಡಾಕೂಟದಲ್ಲಿ ತೋರಿದ ಧೋರಣೆಯೇ ಸಾಕ್ಷಿ” ಎಂದು ಹಿರಿಯ ನಾಗರಿಕರ ಸಕಾಲ ಸೇವಾಕೇಂದ್ರದ ರಾಜ್ಯಾಧ್ಯಕ್ಷ ರಾಜಪ್ಪ ಆರೋಪಿದ್ದಾರೆ.

ಈ ಕುರಿತು ‘ಸಿಟಿಟುಡೆ’ಯೊಂದಿಗೆ ಮಾತನಾಡಿದ ರಾಜಪ್ಪ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಅಧಿಕಾರಿಗಳು ಹಿರಿಯ ನಾಗರಿಕರಿಗೆ ಅನ್ಯಾಯವೆಸಗಿದ್ದಾರೆ. ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳಾದ ಕೆ.ರಾಧ ಹಾಗೂ ಹೆಚ್.ಆರ್. ಶ್ರೀನಿವಾಸ್ ವಿರುದ್ಧ ಹರಿಹಾಯ್ದರು.

ರಾಜಪ್ಪ
ರಾಜಪ್ಪ

ಏಕೆ ಆಕ್ರೋಶ?

ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಜೆ.ಕೆ. ಮೈದಾನದಲ್ಲಿ ಕಳೆದ ಅ.4ರಂದು ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿರಿಯ ನಾಗರಿಕರ ಸಕಾಲ ಸೇವಾ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿತ್ತು. ಮೈಸೂರು ಸೇರಿದಂತೆ ಜಿಲ್ಲೆಯ ಸುಮಾರು 300 ಜನ ಹಿರಿಯ ನಾಗರಿಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರದರ್ಶನ ನೀಡಿದ್ದರು.

ಇಲಾಖೆಯು ಘೋಷಿಸಿದಂತೆ ವಿಜೇತರಿಗೆ 5 ಸಾವಿರ, 3 ಸಾವಿರ ಹಾಗೂ 2 ಸಾವಿರ ರೂ.ಗಳನ್ನು ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ನೀಡಬೇಕಾಗಿತ್ತು. ಆದರೆ ಅಧಿಕಾರಿಗಳು ಲಂಚಗುಳಿತನ ಹಾಗೂ ದುರ್ವತನೆ ಪ್ರದರ್ಶಿಸಿ, ತೀರಾ ಕಡಿಮೆ ಎನಿಸುವಂತ ಮೊತ್ತ ನೀಡಿದ್ದಾರೆ.

ವಿಜೇತರಿಗೆ ನಾಲ್ಕುನೂರು(ಪ್ರಥಮ), ಮೂನ್ನೂರು(ದ್ವಿತೀಯ) ಹಾಗೂ ಇನ್ನೂರು(ತೃತೀಯ) ರೂಪಾಯಿಗಳ ಚೆಕ್ ವಿತರಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಹೆಚ್.ಆರ್. ಶ್ರೀನಿವಾಸ್ ಅವರು ಹಿರಿಯ ನಾಗರಿಕರೊಂದಿಗೆ ದುವರ್ತನೆ ತೋರುತ್ತಿದ್ದು ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕೊಟ್ಟಿರುವುದು ತೀರಾ ಕಡಿಮೆ ಮೊತ್ತವಾದರೂ, ಸರ್ಕಾರದಿಂದ ಮಂಜೂರಾಗಿದ್ದ ಹಣವನ್ನು ದುರುಪಯೋಗಪಡಿಸಿಕೊಂಡು ವಿಜೇತರಿಗೆ ಸಲ್ಲಬೇಕಾದ ಗೌರವಧನವನ್ನು ನೀಡಲು ವಿಳಂಬ ಮಾಡಿದ್ದು ಹಿರಿಯ ನಾಗರಿಕರನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ರಾಜಪ್ಪ ಅವರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಸ್ವಜನ ಪಕ್ಷಪಾತ ಎಸಗಿದರೇ ಅಧಿಕಾರಿಗಳು?

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕ್ರೀಡಾಕೂಟದ ನಿಮಿತ್ತ ಬಿಡುಗಡೆಗೊಳಿಸಿದ್ದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಲ್ಲ. ದಸರಾ ಮಹೋತ್ಸವ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳ ಮಕ್ಕಳಿಂದ ಕಾರ್ಯಕ್ರಮ ಮಾಡಿಸಿ ಹಣ ಕೊಳ್ಳೆ ಹೊಡೆದಿದ್ದಾರೆ. ಇಲಾಖೆಯ ಅಧಿಕಾರಿಗಳು ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಸರ್ಕಾರದ ಸವಲತ್ತುಗಳ ಮಾಹಿತಿ ನೀಡುವುದಿಲ್ಲ. ಕಾರ್ಯಕ್ರಮದಲ್ಲಿ ಹಾಜರಾಗಿ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಿಲ್ಲ. ಕಚೇರಿಯಲ್ಲಿ ವಿನಾಕಾರಣ ಕಾಯಿಸುವುದು ಸೇರಿದಂತೆ ಉದ್ಧಟತನ ತೋರುತ್ತಿದ್ದಾರೆ ಎಂದು ರಾಜಪ್ಪ ಬೇಸರ ವ್ಯಕ್ತಪಡಿಸಿದರು.

ಅಮಾನತು ಮಾಡಲು ಒತ್ತಾಯ:

ಹಿರಿಯ ನಾಗರಿಕರು ದೂರದ ಊರುಗಳಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಅವರಿಗೆ ಆಟೋ ಅಥವಾ ಬಸ್ ಪ್ರಯಾಣದ ವೆಚ್ಚಕ್ಕೂ ಇದು ಸಾಕಾಗುವುದಿಲ್ಲ. ಹೊಣೆಗೇಡಿತನ ತೋರುತ್ತಿರುವ ಅಧಿಕಾರಿಗಳಿಗೆ ಬುದ್ಧಿ ಕಲಿಸಬೇಕಾದರೆ ಅವರನ್ನು ಸರ್ಕಾರ ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ನಾಗರಿಕರಿಗೆ ವಿತರಿಸಲಾದ ಕಡಿಮೆ ಮೊತ್ತದ ಬಹುಮಾನದ ಚೆಕ್ ಗಳು.
ಹಿರಿಯ ನಾಗರಿಕರಿಗೆ ವಿತರಿಸಲಾದ ಕಡಿಮೆ ಮೊತ್ತದ ಬಹುಮಾನದ ಚೆಕ್ ಗಳು.

Leave a Reply

comments

Related Articles

error: