ಮೈಸೂರು

ಮೈಸೂರು ವಿವಿ ಸಿಬ್ಬಂದಿ ನೇಮಕ: ರಾಜ್ಯಪಾಲರಿಂದ ಹಸಿರು ನಿಶಾನೆ?

ಕರ್ನಾಟಕ ರಾಜ್ಯಪಾಲ, ವಿಶ್ವವಿದ್ಯಾನಿಲಯಗಳ ಕುಲಾಧಿಪತಿ ವಜುಭಾಯಿ ವಾಲಾ ಮೈಸೂರು ವಿವಿ ಬೋಧಕ ಸಿಬ್ಬಂದಿ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯುಜಿಸಿ ನಿಯಮಗಳ ಪ್ರಕಾರ ನೇಮಕಾತಿ ನಡೆಸಲು ಹಸಿರು ನಿಶಾನೆ ತೋರಿದ್ದಾರೆಂದು ನಂಬಲರ್ಹ ಮೂಲಗಳು ತಿಳಿಸಿವೆ.

ಮೈಸೂರು ವಿವಿಯಲ್ಲಿ 205 ವಿವಿಧ ಬೋಧಕ ಹುದ್ದೆಗಳು ಖಾಲಿ ಇತ್ತು. ಅದರಂತೆ ನೇಮಕ ಪ್ರಕ್ರಿಯೆಗೆ ಮುಂದಾಗಿತ್ತು. ಎರಡು ತಿಂಗಳ ಹಿಂದೆ ಈ ಸಂಬಂಧ ಪತ್ರಿಕೆಗಳಲ್ಲಿ ಸಹಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು.

ನೇಮಕಾತಿ ಪ್ರಕ್ರಿಯೆಗೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ನೇಮಕಾತಿಗೆ ತಡೆ ನೀಡುವಂತೆಯೂ ಕೋರಲಾಗಿತ್ತು. ಈ ಸಂಬಂಧ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮೈಸೂರು ವಿವಿ ಕುಲಸಚಿವರಿಗೆ ಪತ್ರ ಬರೆದು ಯಾವುದೇ ನೇಮಕಾತಿ ನಡೆಸದಂತೆ ತಾಕೀತು ಮಾಡಿದ್ದರು. ಇದಕ್ಕುತ್ತರಿಸಿದ ಮೈಸೂರು ವಿವಿ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಬೋಧಕ ಸಿಬ್ಬಂದಿಯ ನೇಮಕದ ಮಹತ್ವವನ್ನು ಸ್ಪಷ್ಟಪಡಿಸಿತ್ತು. ಆದರೆ ಸರ್ಕಾರ ನೇಮಕ ಕುರಿತು ಹಸಿರು ನಿಶಾನೆ ತೋರಿರಲಿಲ್ಲ.

ರಾಜ್ಯಪಾಲರು ಇದೀಗ ಮಧ್ಯಪ್ರವೇಶಿಸಿದ್ದು ಬೋಧಕ ಸಿಬ್ಬಂದಿ ನೇಮಕ ಪ್ರಕ್ರಿಯೆ ಮುಂದುವರಿಸುವಂತೆ  ವಿವಿ ಕುಲಪತಿ ರಂಗಪ್ಪ ಅವರಿಗೆ ಪತ್ರದ ಮುಖೇನ ಸೂಚಿಸಿದ್ದಾರೆ.  ಯುಜಿಸಿ ನಿಯಮಾವಳಿಗಳಡಿ ನೇಮಕಾತಿ ನಡೆಸುವಂತೆ ಸೂಚನೆ ನೀಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

Leave a Reply

comments

Related Articles

error: