ಮೈಸೂರು

ಬಂತು ಗೌರಿ ಹಬ್ಬ: ಬಾಗಿನದ ಮೊರಗಳು ಸಿದ್ಧ

ಶ್ರಾವಣಮಾಸ ಬಂದರೆ ಸಾಕು. ಹೆಂಗಳೆಯರಿಗೆ ಹಬ್ಬದ ಸಂಭ್ರಮ. ಈ ಮಾಸದಲ್ಲಿ ಹಬ್ಬಗಳು ಸಾಲುಗಟ್ಟಿ ಬರುತ್ತವೆ. ರಕ್ಷಾಬಂಧನದಿಂದ ಮೊದಲ್ಗೊಂಡು ದೀಪಾವಳಿಯವೆರೆಗೂ ಮುಂದುವರಿದಿರುತ್ತದೆ. ಹೆಣ್ಣು ಮಕ್ಕಳಿಗೂ ಈ ಹಬ್ಬಕ್ಕೂ ಅದೇನೋ ನಂಟು. ಹಬ್ಬದ ಸಂಪೂರ್ಣ ತಯಾರಿ ಹೆಂಗಳೆಯರೇ ಮಾಡೋದು. ಸದ್ಯದಲ್ಲಿಯೇ ಬರುವ ಗೌರಿ ಗಣೇಶ ಹಬ್ಬವೂ ಇದಕ್ಕೆ ಹೊರತಾಗಿಲ್ಲ. ಅದರಲ್ಲೂ ಗೌರಿ ಗಣೇಶ ಹಬ್ಬದಲ್ಲಿ ಬಾಗಿನ ನೀಡುವುದು ಅತ್ಯಂತ ಮಹತ್ವದ ಪಾತ್ರವನ್ನು ಪಡೆದುಕೊಳ್ಳುತ್ತದೆ. ಇದೇ ಬರುವ ಭಾನುವಾರವೇ ಗೌರಿಹಬ್ಬ.

mora1

ಈಗಾಗಲೇ ನಗರದ ಪ್ರಮುಖ ಬೀದಿಗಳಲ್ಲಿ ಮೊರದ ತಯಾರಿ ಜೋರಾಗಿಯೇ ನಡೆದಿದೆ. ಅಗ್ರಹಾರದ ನೂರೊಂದು ಗಣಪತಿಯ ದೇವಸ್ಥಾನದ ಬಳಿ ಇರುವ ಬೃಹತ್ ಆಲದ ಮರದ ಬುಡದಲ್ಲಿ ನಂಜನಗೂಡಿನ ಚಾಮಲಾಪುರದ ಬೀದಿಯಿಂದ ಬಂದಿರುವ ಸುಮಾರು ಹದಿನೈದಕ್ಕೂ ಹೆಚ್ಚು ಮಂದಿ ಮೊರದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿವರ್ಷವೂ ಅವರು ಇದೇ ಜಾಗದಲ್ಲಿ ಕುಳಿತು ಮೊರವನ್ನು ತಯಾರಿಸುತ್ತಾರಂತೆ. ಮೈಸೂರಿನಲ್ಲಿ ಸಾಕಷ್ಟು ಬಿದಿರಿಲ್ಲದ ಕಾರಣ ಬೇರೆ ಜಿಲ್ಲೆಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಮಡಿಕೇರಿ ಬಿದಿರಿಗೆ ಇಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದರೂ ತಪ್ಪಾಗಲಾರದು. ಅಷ್ಟೆಲ್ಲ ಕಷ್ಟಪಟ್ಟು ಮೊರ ಯಾಕೆ ತಯಾರಿಸಬೇಕು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಮ್ಮ ನಾಡಿನ ಮಣ್ಣಿನ ಸಂಸ್ಕೃತಿಯೇ ಹಾಗೆ. ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರೂ ಇಲ್ಲಿ ಹಬ್ಬ-ಹರಿದಿನಗಳನ್ನು ಆಚರಿಸುತ್ತಾರೆ. ಅದರಿಂದಲೇ ಇಂದು ನಮ್ಮ ಸಂಸ್ಕೃತಿ ಉಳಿದುಕೊಂಡಿದೆ ಅಂತಲೂ ಹೇಳಬಹುದು.

ಹಿಂದೂ ಸಂಪ್ರದಾಯದ ಪ್ರಕಾರ ಮೊರವನ್ನು ತುಂಬಿಸಿ ಬಾಗಿನ ನೀಡಿದರೆ ಹೆಚ್ಚು ಶ್ರೇಷ್ಠ ಎಂಬ ನಂಬಿಕೆಯಿದೆ. ಅದಕ್ಕಾಗಿಯೇ ಮೊರವನ್ನು ಶುಭ್ರಗೊಳಿಸಿ, ಮೊರದ ಮೂಲೆಯಲ್ಲಿ ಅರಿಸಿನ, ಕುಂಕುಮಗಳನ್ನು ಹಚ್ಚಿ ಸಿಂಗರಿಸಲಾಗುತ್ತದೆ. ಮುತ್ತೈದೆ ಬಾಗಿನ ಎಂದು ಒಂದು ಮೊರದಲ್ಲಿ ಧಾನ್ಯಗಳು, ತೆಂಗಿನಕಾಯಿ, ಬಳೆ, ಕನ್ನಡಿ, ಕರಿಮಣಿ, ಬಿಚ್ಚೋಲೆ, ಅರಿಸಿನ, ಕುಂಕುಮ, ಬಾಚಣಿಗೆ, ಬೆಲ್ಲ, ರವಿಕೆ ಕಣ, ಹಣ್ಣುಗಳು, ಸೀರೆ ಇವೆಲ್ಲವನ್ನು ಇಟ್ಟು ಮತ್ತೊಂದು ಮೊರದಲ್ಲಿ ಮುಚ್ಚಿ ನೀಡಲಾಗುತ್ತದೆ. ಗೌರಿ ಹಬ್ಬದಂದು ದೇವರ ಮನೆಯನ್ನು ಶುಭ್ರಗೊಳಿಸಿ, ಬಾಳೆಯ ಕಂದು-ಮಾವಿನ ತೋರಣಗಳನ್ನು ಕಟ್ಟಿ ಶೃಂಗರಿಸಲಾಗುತ್ತದೆ. ಬಳಿಕ ಮಣೆಯ ಮೇಲೆ ಮಡಿ ವಸ್ತ್ರವನ್ನು ಹಾಸಿ ಅದರ ಮೇಲೆ ಗೌರಿ-ಗಣೇಶನ ವಿಗ್ರಹವಿಟ್ಟು, ವಿಗ್ರಹದ ಮುಂದೆ ರಂಗೋಲಿಯಿಟ್ಟು ಹೆಂಗಳೆಯರು ಸಂಭ್ರಮಿಸುತ್ತಾರೆ. ಮುತ್ತೈದೆಯರು ಕೈಗೆ ಅರಿಶಿನದ ದಾರದಲ್ಲಿ ಸೇವಂತಿಗೆ ಹೂವಿರಿಸಿ ವೃತಗೈಯ್ಯುತ್ತಾರೆ. ಹೆಣ್ಣು ಮಕ್ಕಳು ತವರಿಗೆ ತೆರಳಿ ತಾಯಿ, ಅತ್ತಿಗೆಯರಿಗೆ ಬಾಗಿನ ನೀಡಿ ಅವರಿಂದ ಆಶೀರ್ವಾದ ಪಡೆದು ಉಡುಗೊರೆಯನ್ನೂ ಪಡೆಯುತ್ತಾರೆ. ಈ ಆಚರಣೆಯಲ್ಲಿ ಬಾಗಿನ ನೀಡಲು ಹೆಚ್ಚಾಗಿ ಮೊರ ಬಳಸುವುದರಿಂದ ಗೌರಿ ಹಬ್ಬದ ಸಮಯದಲ್ಲಿಯೇ ವಿಶೇಷವಾಗಿ ಈ ಮೊರ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಗೊಳ್ಳುತ್ತದೆ.

mora2

ನಂಜನಗೂಡಿನ ಚಾಮಲಾಪುರದ ಬೀದಿಯಿಂದ ಮೊರ ತಯಾರಿಕೆಗೆಂದೇ ಬಂದಿರುವ ವೆಂಕಟಮ್ಮನ ಬಿಚ್ಚು ನುಡಿಗಳಿವು. ನಾವು ನಸುಕಿನಲ್ಲಿಯೇ ಹೊರಟು ಬರುತ್ತೇವೆ. ಬೆಳಿಗ್ಗೆಯಿಂದಲೇ ಕೆಲಸ ಆರಂಭಿಸಿ ರಾತ್ರಿಯತನಕವೂ ಮುಂದುವರಿಸುತ್ತೇವೆ. ಗೌರಿ-ಗಣೇಶ ಹಬ್ಬದಲ್ಲಿ ಮಾತ್ರ ನಾವು ಮೊರ ತಯಾರಿಕೆಗೆ ಇಲ್ಲಿ ಬರುತ್ತೇವೆ. ಉಳಿದ ಸಮಯದಲ್ಲಿ ನಮ್ಮ-ನಮ್ಮ ಊರುಗಳಲ್ಲಿಯೇ ನಾವು ನಮ್ಮ ಕಾಯಕ ಮುಂದುವರಿಸುತ್ತೇವೆ ಎಂದರು. ಈಗ ಪ್ಲಾಸ್ಟಿಕ್ ಹಾವಳಿ ಜಾಸ್ತಿ ಆಗಿದೆಯಲ್ಲ ಮೊರ ಮಾರಾಟವಾಗುತ್ತದೆಯೇ? ಜನರು ಕೊಂಡುಕೊಳ್ಳಲು ಬರುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕಳೆದ ವರ್ಷಕ್ಕಿಂತಲೂ ಈ ಬಾರಿ ವ್ಯಾಪಾರ ಚೆನ್ನಾಗಿಯೇ ನಡೆದಿದೆ. ದಿನಕ್ಕೆವೊಂದಕ್ಕೆ ಒಬ್ಬೊಬ್ಬರು ಸುಮಾರು 10 ಮೊರ ತಯಾರಿಸುತ್ತೇವೆ. ಎಲ್ಲವೂ ಮಾರಾಟವಾಗುತ್ತಿದೆ ಎಂದರು. ಮೊರ ಖರೀದಿಸುವವರ ಸಂಖ್ಯೆ ಕಡಿಮೆಯೇನೂ ಆಗಿಲ್ಲ. ಚಿಕ್ಕಂದಿನಿಂದಲೇ ಈ ಕಾಯಕವನ್ನು ನಾವು ಮೈಗೂಡಿಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಅದೇ ಬೀದಿಯ ನೀಲಮ್ಮ-ವೆಂಕಟಮ್ಮ.

ಒಟ್ಟಿನಲ್ಲಿ ಈ ಮೊರದ ಬಾಗಿನ ನೀಡುವ ಸಂಸ್ಕೃತಿ ಮುಂದಿನ ಪೀಳಿಗೆಗೂ ಮುಂದುವರಿಯಲಿ. ಆಧುನಿಕತೆಯ ಸೋಗಿನಲ್ಲಿ, ಒತ್ತಡಗಳ ಜಂಜಾಟದಲ್ಲಿ ಹಳೆಯ ಸಂಪ್ರದಾಯಗಳು ಮಾಯವಾಗದಿರಲಿ ಎನ್ನುವುದೇ ನಮ್ಮ ಆಶಯ.

– ಸುಹಾಸಿನಿ ಹೆಗಡೆ

Leave a Reply

comments

Related Articles

error: