ಮೈಸೂರು

ಪ್ರಾಥಮಿಕ ಶಾಲೆಯಿಂದಲೇ ಚೂಡಿದಾರ್ ಕಡ್ಡಾಯವಾಗಲಿ : ಸ್ನೇಕ್ ಶ್ಯಾಮ್

ಸರ್ಕಾರವು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಚೂಡಿದಾರ್ ಅನ್ನು ವಸ್ತ್ರ ಸಂಹಿತೆಯಾಗಿ ಜಾರಿಗೊಳಿಸಿರುವುದು ಸಂತೋಷಕರ ಸಂಗತಿಯಾಗಿದ್ದು ಪ್ರಾಥಮಿಕ ಶಾಲಾ ಮಕ್ಕಳಿಂದಲೇ ಇದನ್ನು ಕಡ್ಡಾಯಗೊಳಿಸಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುವುದು ಎಂದು ಮಹಾನಗರಪಾಲಿಕೆ ಸದಸ್ಯ ಹಾಗೂ ಉರಗಪ್ರೇಮಿ ಸ್ನೇಕ್ ಶ್ಯಾಮ್ ಅಭಿಪ್ರಾಯಪಟ್ಟರು.
ಅವರು ನಗರದ ಪತ್ರಕರ್ತರ ಭವನದಲ್ಲಿ ಇಂದು (ಅ.19) ಸುದ್ದಿಗೋಷ್ಠಿ ನಡೆಸಿ, ಚೂಡಿದಾರನ್ನು ವಸ್ತ್ರ ಸಂಹಿತೆಯಾಗಿ ಅಳವಡಿಸುವ ಬಗ್ಗೆ ಕಳೆದ ಐದು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ಈಗ ಜಾರಿಯಾಗಿರುವುದು ಸಂತೋಷಕರ ಸಂಗತಿಯಾಗಿದೆ. ನಾನೊಬ್ಬ ಆಟೋ ಚಾಲಕನಾಗಿದ್ದು ಮಕ್ಕಳು (ಹೆಣ್ಣು) ಅದರಲ್ಲೂ ಶಾಲಾ ಮಕ್ಕಳ ಮನಸ್ಥಿತಿ ಹಾಗೂ ಸಮಸ್ಯೆ ಬಗ್ಗೆ ತೀರ ಹತ್ತಿರದಿಂದ ಬಲ್ಲೆ. ಹಿಂದೆಲ್ಲ 16 ವರ್ಷದ ನಂತರ ಋತುಮತಿಯಾಗುತ್ತಿದ್ದರು, ಈಗಿನ ಆಹಾರದ ವ್ಯತ್ಯಾಸವೋ ಅಥವಾ ಅಸಹಜ ಬೆಳೆವಣಿಗೆಯಿಂದಲೋ ಅತಿ ಚಿಕ್ಕ ವಯಸ್ಸಿಗೆ ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಋತುಮತಿಯಾಗುತ್ತಿದ್ದು ಪೋಷಕರಲ್ಲಿ ಆತಂಕವುಂಟು ಮಾಡಿದೆ.
ಅವರು ಮುಂದುವರೆದು, ಪ್ರಾಥಮಿಕ ಶಾಲಾ ಮಕ್ಕಳಿಗೆ ದೈಹಿಕ ಬೆಳವಣಿಗೆಯಿರುವುದೇ ಹೊರತು ಮಾನಸಿಕ ಪ್ರಬುದ್ಧತೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಮಾಜಘಾತಕರು ವಂಚಿಸಿ ದಾರಿ ತಪ್ಪಿಸುವರು. ಯಾಂತ್ರಿಕ ಯುಗದಲ್ಲಿ ಪೋಷಕರಿಬ್ಬರು ದುಡಿಮೆಗೆ ಶರಣಾಗಿದ್ದು ಮಕ್ಕಳ ರಕ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸುವರು ಎಂದು ತಿಳಿಸಿದ ಸ್ನೇಕ್ ಶ್ಯಾಮ್, ಎಷ್ಟೋ ಪೋಷಕರು ಪೋನ್ ಕರೆ ಮಾಡಿ ಮಕ್ಕಳ ಬಗ್ಗೆ ಕೇರ್ ತೆಗೆದುಕೊಳ್ಳಿ ಎಂದು ನನಗೆ ತಿಳಿಸುವುದುಂಟು. ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯಿಸುವಂತೆ ಜಾರಿಗೊಳಿಸಿರುವ ವಸ್ತ್ರ ಸಂಹಿತೆಯನ್ನು ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

Leave a Reply

comments

Related Articles

error: