ಕರ್ನಾಟಕ

ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಹರಪ್ಪಳ್ಳಿ ರವೀಂದ್ರ

ಮಡಿಕೇರಿ,ಜು.29-ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಸಮೀಪದ ಗೌಡಳ್ಳಿ ಗ್ರಾಮದ ದಿ.ಪಾರ್ವತಮ್ಮ ಪುಟ್ಟಸ್ವಾಮಿ ಅವರ ಗದ್ದೆಯಲ್ಲಿ ಶನಿವಾರ ಕೆಸರುಗದ್ದೆ ಕ್ರೀಡಾಕೂಟ ವಿಜೃಂಭಣೆಯಿಂದ ನಡೆಯಿತು.

ಗ್ರಾಮೀಣ ಜನರ ಅಚ್ಚುಮೆಚ್ಚಿನ ಕ್ರೀಡಾಕೂಟ ಎನಿಸಿರುವ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಪುರುಷರು, ಮಹಿಳೆಯರು, ಮಕ್ಕಳು ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು. ಕ್ರೀಡಾಕೂಟದಲ್ಲಿ ಪುರುಷರಿಗೆ ಹಗ್ಗ ಜಗ್ಗಾಟ, ವಾಲಿಬಾಲ್ ಹಾಗೂ ಕೆಸರು ಗದ್ದೆ ಓಟದ ಸ್ಪರ್ಧೆ ನಡೆಯಿತು. ಹಾಗೂ ಮಹಿಳೆಯರಿಗೆ ಥ್ರೋಬಾಲ್, ಹಗ್ಗ ಜಗ್ಗಾಟ ಹಾಗೂ ಕೆಸರು ಗದ್ದೆ ಓಟದ ಸ್ಪರ್ಧೆ ನಡೆಯಿತು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬೆಂಗಳೂರಿನ ಉದ್ಯಮಿ ಹರಪ್ಪಳ್ಳಿ ರವೀಂದ್ರ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಒಕ್ಕಲಿಗರ ಯುವವೇದಿಕೆಯವರು ಕೆಸರುಗದ್ದೆ ಕ್ರೀಡಾಕೂಟವನ್ನು ನಡೆಸುತ್ತಿರುವುದು ಶ್ಲಾಘನೀಯ. ಕ್ರೀಡಾಕೂಟವನ್ನು ನಡೆಸುವುದರಿಂದ ಜನಾಂಗದವರಲ್ಲಿ ಒಗ್ಗಟ್ಟು ಮೂಡುತ್ತದೆ. ಮುಂದಿನ ದಿನಗಳಲ್ಲಿ ಒಕ್ಕಲಿಗ ಜನಾಂಗದವರು ಸಂಘಟಿತರಾಗಿ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ನಡೆಸುವಂತಾಗಲೆಂದು ಹಾರೈಸಿದರು. ಒಕ್ಕಲಿಗರು ಸಂಘಟಿತರಾಗಿ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರೆಯುವುದರೊಂದಿಗೆ ಸರಕಾರದಿಂದ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ಕರೆನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ತಾಪಂ ಸದಸ್ಯೆ ಕುಸುಮಾ ಅಶ್ವಥ್, ಅರುಣ್ ಕೊತ್ನಳ್ಳಿ, ಬೆಂಗಳೂರು ವಿಶ್ವ ಒಕ್ಕಲಿಗರ ಯುವ ಬ್ರಿಗೇಡ್‍ನ ರಾಜ್ಯಾಧ್ಯಕ್ಷ ಗಿರೀಶ್ ಮಲ್ಲಪ್ಪ, ಯುವ ವೇದಿಕೆ ಅಧ್ಯಕ್ಷ ಬಿ.ಜೆ.ದೀಪಕ್, ಜಿ.ಪಂ. ಸದಸ್ಯರಾದ ಪೂರ್ಣಿಮಾ ಗೋಪಾಲ್, ಕೆ.ಪಿ.ಚಂದ್ರಕಲಾ, ದೊಡ್ಡಮಳ್ತೆ ಗ್ರಾ.ಪಂ.ಅಧ್ಯಕ್ಷ ಸುಳಿಮಳ್ತೆ ದಿವಾಕರ್, ಪ್ರಮುಖರಾದ ಮಂಜೂರು ತಮ್ಮಣ್ಣಿ, ಹೆಚ್.ಕೆ.ತಮ್ಮೇಗೌಡ, ಪುರುಷೋತ್ತಮ್, ನತೀಶ್ ಮಂದಣ್ಣ ಇದ್ದರು. ಜಿಮ್ಮಿ ಕಾರ್ಯಕ್ರಮ ನಿರ್ವಹಿಸಿದರು. (ವರದಿ-ಕೆ.ಸಿ.ಐ, ಎಂ.ಎನ್)

Leave a Reply

comments

Related Articles

error: