ಕರ್ನಾಟಕ

ಕೃಷ್ಣಾ ನದಿ ನೀರು ಹಂಚಿಕೆ ವಿವಾದ: ಕರ್ನಾಟಕಕ್ಕೆ ನಿರಾಳ

ನವದೆಹಲಿ: ಕೃಷ್ಣಾ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ನಾಲ್ಕು ರಾಜ್ಯಗಳಲ್ಲಿ ವಿವಾದಕ್ಕೆ ಕಾರಣವಾಗಿದ್ದ ಕೃಷ್ಣಾ ನದಿ ನೀರಿನ ಹಂಚಿಕೆ ಸಂಬಂಧ ನ್ಯಾಯಾಧಿಕರಣ ಮಹತ್ವದ ತೀರ್ಪು ನೀಡಿದ್ದು, ತೆಲಂಗಾಣ ರಾಜ್ಯ ಆಂಧ್ರ  ಪ್ರದೇಶದೊಂದಿಗೆ ನೀರು ಹಂಚಿಕೆ ಮಾಡಿಕೊಳ್ಳಬೇಕು ಎಂದು ಆದೇಶಿಸಿದೆ.

2013ರಲ್ಲಿ ನೀಡಿದ್ದ ಕೃಷ್ಣಾ ನದಿ ಐ ತೀರ್ಪನ್ನು ಬದಲಾವಣೆ ಮಾಡುವುದು ಅಸಾಧ್ಯ. ಆಂಧ್ರ ಪ್ರದೇಶ ರಾಜ್ಯಕ್ಕೆ ಹಂಚಿಕೆ ಮಾಡಲಾಗಿರುವ ನೀರಲ್ಲೇ ತೆಲಂಗಾಣ ರಾಜ್ಯ ಕೂಡ ಹಂಚಿಕೆ ಮಾಡಿಕೊಳ್ಳಬೇಕು ಎಂದು ಆದೇಶಿಸಿದೆ. ಯೋಜನಾವಾರು ನೀರು ಹಂಚಿಕೆ ಮಾಡುವಂತೆ ತೆಲಂಗಾಣ ರಾಜ್ಯ ಸಲ್ಲಿಸಿದ್ದ ಅರ್ಜಿಯ ಇತ್ಯರ್ಥ ಪಡಿಸಿದ ಕೃಷ್ಣಾ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾ.ಬ್ರಿಜೇಶ್ ಕುಮಾರ್ ಅವರು, ತೆಲಂಗಾಣಕ್ಕಾಗಿ ಐ ತೀರ್ಪನ್ನು ಮರು ಪರಿಶೀಲಿಸುವ ಅಗತ್ಯವಿಲ್ಲ. ಹೀಗಾಗಿ ಈ ಹಿಂದೆ ಆಂಧ್ರ ಪ್ರದೇಶಕ್ಕೆ ಹಂಚಿಕೆ ಮಾಡಲಾಗಿರುವ ನೀರಲ್ಲೇ ತೆಲಂಗಾಣಕ್ಕೂ ನೀರು ಬಿಡುಗಡೆ ಮಾಡಬೇಕು ಎಂದು ಹೇಳಿದೆ. ಅಂತೆಯೇ ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿದೆ.

ನ್ಯಾಯಾಧಿಕರಣದ ತೀರ್ಪಿನಿಂದಾಗಿ, ಮಹಾರಾಷ್ಟ್ರ ಮತ್ತು ಕರ್ನಾಟಕ ಪಾಲಿನ ನೀರಿನ ಹಂಚಿಕೆಯಲ್ಲಿ ಯಾವುದೇ  ಬದಲಾವಣೆ ಇಲ್ಲ ಎಂದು ನ್ಯಾಯಾಧಿಕರಣ ಹೇಳಿದೆ.

ಸುಪ್ರೀಂ ಮೆಟ್ಟಿಲೇರಲು ತೀರ್ಮಾನ: ಆಂಧ್ರಪ್ರದೇಶದ ನೀರನ್ನೇ ತೆಲಂಗಾಣ ಹಂಚಿಕೊಳ್ಳಬೇಕು ಎಂಬ ಕೃಷ್ಣಾ ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸಿ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಸುಪ್ರೀಂ ಕೋರ್ಟ್‍ ಮೆಟ್ಟಿಲೇರಲು ತೀರ್ಮಾನಿಸಿವೆ ಎನ್ನಲಾಗಿದೆ.

 

Leave a Reply

comments

Related Articles

error: