ಮೈಸೂರು

ಆರಕ್ಷಕರ ತಯಾರಿಕಾ ಕೇಂದ್ರ ಕೆಪಿಎ

jarman-police-1ಒಂದು ದೇಶ, ಸಮಾಜ, ಸಾರ್ವಜನಿಕರು ನಿರುಮ್ಮಳವಾಗಿ, ನೆಮ್ಮದಿಯಿಂದ ಜೀವಿಸಲು ಶಾಂತಿ ನೆಲೆಸಿರಬೇಕು. ಸಮಾಜ ಘಾತುಕ ಚಟುವಟಿಕೆಗಳು, ಉಗ್ರವಾದಗಳು, ಶಾಂತಿಗೆ ಭಂಗವನ್ನುಂಟು ಮಾಡುವ ಕೆಲಸಗಳು ನಡೆಯಬಾರದು. ಇಂತಹ ಕ್ರೌರ್ಯ ಹಾಗೂ ವಿದ್ರೋಹಿ ಕೃತ್ಯಗಳನ್ನು ತಡೆಯಲು ಸಾಮಾನ್ಯ ಮನುಷ್ಯರಿಂದ ಸಾಧ್ಯವೆ? ಅದು ದೇಶ ಕಾಯುವ ಆರಕ್ಷಕರಿಂದ ಮಾತ್ರ ಸಾಧ್ಯ. ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಆರಕ್ಷರ ಪಾತ್ರ ಬಹಳ ಹಿರಿದು.

ಇಂತಹ ಆರಕಕ್ಷರನ್ನು ಏಕಾಏಕಿ ಕರ್ತವ್ಯಕ್ಕೆ ನೇಮಿಸದೆ ಅವರನ್ನು ಸಕಲ ರೀತಿಯಲ್ಲೂ ಸಜ್ಜುಗೊಳಿಸುವ ಕೆಲಸ ಮಾಡುತ್ತಿರುವುದೆ ನಮ್ಮ ಹೆಮ್ಮೆಯ, ಅಪೂರ್ವ ಇತಿಹಾಸವುಳ್ಳ ಕೆಪಿಎ ಅರ್ಥಾತ್ ಕರ್ನಾಟಕ ಪೊಲೀಸ್ ಅಕಾಡೆಮಿ. ಅಭ್ಯರ್ಥಿಯ ಜ್ಞಾನ, ಸಾಮರ್ಥ್ಯ, ಕೌಶಲ್ಯತೆ, ವ್ಯಕ್ತಿತ್ವ ಹಾಗೂ ಕಾರ್ಯತತ್ಪರತೆಯನ್ನು ಹೆಚ್ಚಿಸಿ ಓರ್ವ ಉತ್ತಮ ಪೊಲೀಸ್ ಅಧಿಕಾರಿಯನ್ನಾಗಿ ತಯಾರು ಮಾಡುವ ಅತ್ಯದ್ಭುತ ಕೆಲಸವನ್ನು ಕೆಪಿಎ ಮಾಡುತ್ತಿದೆ.

ಕೆಪಿಎ ಬೆಳೆದು ಬಂದಿ ಹಾದಿ:

ಕರ್ನಾಟಕ ಪೊಲೀಸ್ ಅಕಾಡೆಮಿ ದೇಶದ ಪ್ರಧಾನ ಪೊಲೀಸ್ ತರಬೇತಿ ಕೇಂದ್ರಗಳಲ್ಲೊಂದು. ಕೆಪಿಎ ತನ್ನ ಒಡಲಲ್ಲಿ ತನ್ನದೆ ಆದ ಇತಿಹಾಸವನ್ನು ಬಚ್ಚಿಟ್ಟುಕೊಂಡು ದೇಶದ ಉದ್ದಗಲಕ್ಕೂ ತನ್ನ ಜನಪ್ರಿಯತೆ ಹಾಗೂ ಪ್ರಾಮುಖ್ಯತೆಯನ್ನು ವಿಸ್ತರಿಸಿಕೊಂಡಿದೆ. ಕೆಪಿಎ ಆರಂಭಕ್ಕೂ ಮುನ್ನ ಪೊಲೀಸ್ ತರಬೇತಿ ಶಾಲೆ ಆರಂಭವಾಗಿದ್ದು ಬೆಂಗಳೂರಿನಲ್ಲಿ ಅದು 1892ರಲ್ಲಿ. ತದನಂತರ ಇದೇ ರೀತಿಯ ತರಬೇತಿ ಶಾಲೆಗಳು ವಿವಿಧ ಜಿಲ್ಲೆಗಳಲ್ಲಿ 1897ರಲ್ಲಿ ಆರಂಭವಾದವು. ಮುಂದುವರಿದು 1939ರಲ್ಲಿ ಮೈಸೂರು, ಮಂಡ್ಯ, ಹಾಸನ, ಕಡೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚುವರಿ ತರಬೇತಿ ಕೇಂದ್ರಗಳು ಆರಂಭವಾದವು. 10 ವರ್ಷಗಳ ಬಳಿಕ ಮತ್ತೆ ಎಲ್ಲಾ ಕೇಂದ್ರಗಳನ್ನು ಸಂಯೋಜಿಸಿ ಬೆಂಗಳೂರಿನ ಕೃಷ್ಣರಾಜಪುರಂನಲ್ಲಿ ಒಂದೇ ಕೇಂದ್ರವನ್ನು ಸ್ಥಾಪಿಸಲಾಯಿತು. 1939ರಿಂದ 49ರ ವರೆಗೆ ಈ ಹತ್ತು ವರ್ಷಗಳು ಮೈಸೂರಿನಲ್ಲಿ ಯಾವ ಜಾಗದಲ್ಲಿ ತರಬೇತಿ ನೀಡಲಾಗುತ್ತಿತ್ತು ಎಂಬುದು ಮಾತ್ರ ತಿಳಿದುಬಂದಿಲ್ಲ.

ಸ್ವಾತಂತ್ರ ಬಂದ ಬಳಿಕ 1952ರಲ್ಲಿ ಮೈಸೂರು ಸಂಸ್ಥಾನದ ಅಂದಿನ ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ತಮ್ಮ ಪದಾತಿ ದಳವನ್ನು ಖಾಲಿ ಮಾಡಿಸಿ ಪೊಲೀಸ್ ತರಬೇತಿ ಕೇಂದ್ರಕ್ಕೆ ವಿಸ್ತಾರವಾದ ಜಾಗ ನೀಡಿ ಅಲ್ಲೇ ಕೇಂದ್ರ ಸ್ಥಾಪಿಸಲು ಅನುಮತಿ ನೀಡುತ್ತಾರೆ. ಡಿಐಜಿ ಹಾಗೂ ಸಿಜೆಡಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ತರಬೇತಿ ಶಾಲೆ ಮೈಸೂರಿಗೆ ಸ್ಥಳಾಂತರವಾದ ಮೇಲೆ ಪೊಲೀಸ್ ತರಬೇತಿ ಕಾಲೇಜಾಗಿ ಮರು ನಾಮಕರಣ ಮಾಡಲ್ಪಡುತ್ತದೆ. ಈ ಕೇಂದ್ರದಲ್ಲಿ ಗೆಜೆಟೆಡ್ ಪ್ರೊಬೆಷನರ್ಸ್‍, ಸಬ್ ಇನ್ಸ್‌ಪೆಕ್ಟರ್‌ಗಳು, ಮುಖ್ಯ ಪೇದೆಗಳು, ಐಪಿಎಸ್ ಅಧಿಕಾರಿಗಳಲ್ಲದೆ ಪೊಲೀಸ್ ಇಲಾಖೆಯನ್ನೂ ಹೊರತುಪಡಿಸಿ ಅಬಕಾರಿ ಅಧಿಕಾರಿಗಳೂ ಸೇರಿದಂತೆ ಇತರರಿಗೂ ತರಬೇತಿ ನೀಡಲಾಗಿದೆ. ತದನಂತರ 1992ರಲ್ಲಿ ತರಬೇತಿ ಕೇಂದ್ರ ಅಕಾಡೆಮಿಯಾಗಿ ನಾಮಕರಣವಾಗಿ ಪ್ರಾಂಶುಪಾಲರ ಬದಲಿಗೆ ನಿರ್ದೇಶಕರನ್ನಾಗಿ ನೇಮಕ ಮಾಡುವ ಪ್ರವೃತ್ತಿ ಆರಂಭವಾಯಿತು.

ಸುಸಜ್ಜಿತ ಗ್ರಂಥಾಲಯ: ಕೆಪಿಎ ಸುಮಾರು 24 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಒಳಗೊಂಡ ಸುಸಜ್ಜಿತ ಗ್ರಂಥಾಲಯವನ್ನು ಹೊಂದಿದೆ. ವಿವಿಧ ಲೇಖಕರ ಒಳಾಂಗಣ ಹಾಗೂ ಹೊರಾಂಗಣ ವಿಷಯಗಳಾದ ಐಪಿಸಿ, ಸಿಆರ್‌ಪಿಸಿ, ಐಇಎ, ಮನಶಾಸ್ತ್ರ, ಎಸ್‌ಎಲ್‌ಎಲ್, ಫೊರೆನ್ಸಿಕ್ ಸೈನ್ಸ್, ಕ್ರಿಮಿನಾಲಜಿ, ಪೊಲೀಸ್ ಕೈಪಿಡಿ, ಪೊಲೀಸ್ ಒಆರ್‌ಐ ಮತ್ತು ಎಂಜಿಎಂಟಿ, ಸಂವಿಧಾನ, ಕಂಪ್ಯೂಟರ್ ವಿಜ್ಞಾನ, ಭಯೋತ್ಪಾದನೆ, ಡ್ರಿಲ್ ಕೈಪಿಡಿ ಸೇರಿದಂತೆ ತರಬೇತಿಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳ ಪುಸ್ತಕಗಳೂ ಇಲ್ಲಿವೆ. ಜತೆಗೆ ವಿವಿಧ ವಿಷಯಗಳ 186 ಸಿ.ಡಿ.ಗಳು ಹಾಗೂ 15 ಡಿವಿಡಿಗಳಿವೆ. ಗ್ರಂಥಾಲಯಕ್ಕೆ ಪ್ರತಿದಿನ ಕನ್ನಡದ 7, ಇಂಗ್ಲಿಷಿನ 5 ದಿನಪತ್ರಿಕೆ, 10 ಇಂಗ್ಲಿಷ್ ನಿಯತಕಾಲಿಕೆಗಳು ಸೇರಿದಂತೆ ಇತರೆ ಪತ್ರಿಕೆಗಳು ಬರುವುದರಿಂದ ಸ್ಪರ್ಧಾಳುಗಳಗೆ ಬೇಕಾದ ಪ್ರತಿಯೊಂದು ಮಾಹಿತಿಯೂ ಇಲ್ಲಿ ಸಿಗುತ್ತದೆ. ಇದರೊಂದಿಗೆ ಸುಸಜ್ಜಿತ ಆಡಿಟೋರಿಯಂ, ಉಪನ್ಯಾಸ ಸಭಾಂಗಣ, ಕಂಪ್ಯೂಟರ್ ಲ್ಯಾಬ್, ಸೈನ್ಸ್ ಲ್ಯಾಬ್, ಹಾಸ್ಟೆಲ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ತರಬೇತಿ ಕೇಂದ್ರ ಇದಾಗಿದೆ.

ವಿದೇಶಗಳಲ್ಲೂ ಕೆಪಿಎ ಕಂಪು: ಕೆಪಿಎ ಜನಪ್ರಿಯತೆ ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದೇಶಗಳಲ್ಲೂ ಇದರ ಕಂಪು, ಜನಪ್ರಿಯತೆ ಪಸರಿಸಿದೆ. ದೇಶದ ಪೊಲೀಸ್ ಅಭ್ಯರ್ಥಿಗಳಲ್ಲದೆ ಹೊರರಾಜ್ಯದ ಹಾಗೂ ವಿದೇಶಿ ಅಧಿಕಾರಿಗಳಿಗೂ ಇಲ್ಲಿ ತರಬೇತಿ ನೀಡಲಾಗಿದೆ. 1974-75ರ ಅವಧಿಯಲ್ಲಿ ಪಾಂಡಿಚೇರಿಯ 6, 1990-91ರಲ್ಲಿ ರಾಯಲ್ ಭೂತಾನ್ ಹಾಗೂ ಮಾಲ್ಡೀವ್ಸ್‌ನ ತಲಾ ಇಬ್ಬರು, 1999-2000ರಲ್ಲಿ ಮಾಲ್ಡೀವ್ಸ್‌ನ 3, 2009-10ರಲ್ಲಿ ಮಾಲ್ಡೀವ್ಸ್‌ನ 6, ಪಾಂಡಿಚೇರಿಯ 5 ಮಂದಿ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.

1913ರಲ್ಲಿ ಅಲ್ಲ 1939ರಲ್ಲಿ: ಮೈಸೂರು, ಮಂಡ್ಯ ಹಾಸನ, ಶಿವಮೊಗ್ಗ, ಕಡೂರು ಜಿಲ್ಲೆಗಳಲ್ಲಿ ಪೊಲೀಸ್ ತರಬೇತಿ ಕೇಂದ್ರ 1913ರಲ್ಲಿ ಆರಂಭವಾಯಿತು ಎಂದು ಕಾಮತ್ ಅವರ ಕರ್ನಾಟಕ ಸ್ಟೇಟ್ ಗೆಜೆಟಿಯರ್‌ನಲ್ಲಿ ಉಲ್ಲೇಖಿಸಲಾಗಿದ್ದು ಎಲ್ಲರೂ 1913ರನ್ನು ಆಧಾರವಾಗಿಟ್ಟುಕೊಂಡು ತರಬೇತಿ ಸಂಸ್ಥೆಗೆ ನೂರು ವರ್ಷವಾಗಿದೆ ಎಂದು ತಿಳಿದಿದ್ದಾರೆ. ಆದರೆ, ಅದು ಸತ್ಯಕ್ಕೆ ದೂರವಾದುದು. ಏಕೆಂದರೆ 1913ರಲ್ಲಿ ಮಂಡ್ಯ ಜಿಲ್ಲೆ ಉದಯವಾಗಿಯೇ ಇರಲಿಲ್ಲ. ಹಾಗಾಗಿ 13ರಲ್ಲಿ ಆರಂಭವಾಗುವುದಕ್ಕೆ ಹೇಗೆ ಸಾಧ್ಯ. ಇದು ಕಣ್ತಪ್ಪಿನಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ಆಗಿರುವ ದೋಷ. ಪೊಲೀಸ್ ತರಬೇತಿ ಸಂಸ್ಥೆ 1987ರಲ್ಲಿ ಆರಂಭವಾಗಿರುವುದರಿಂದ ಮುಂದಿನ 2007ಕ್ಕೆ 125 ವರ್ಷವಾಗಲಿದೆ. ಇದು ಮಹತ್ಸಾಧನೆಯೇ ಸರಿ.

malagattiಕರ್ನಾಟಕ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕಿ ಧರಣಿ ದೇವಿ ಮಾಲಗತ್ತಿ ಅವರು ಮಾತನಾಡಿ, ಯಾವುದೇ ಕ್ಷೇತ್ರವಾದರೂ ತರಬೇತಿ ಬಹಳ ಮುಖ್ಯ. ಆ ಕ್ಷೇತ್ರದ ಬಗ್ಗೆ ಏನೂ ತಿಳಿಯದೆ ಏಕಾಏಕಿ ಕಾರ್ಯಪ್ರವೃತ್ತರಾಗುವುದು ಸೂಕ್ತವಲ್ಲ. ಹಾಗಾಗಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ, ಸಾರ್ವಜನಿಕರಿಗೆ ರಕ್ಷಣೆ ನೀಡುವ ಆರಕ್ಷರಿಗೆ ತರಬೇತಿ ಅತ್ಯಗತ್ಯ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆ ಭಿನ್ನ. ಮೊದಲು ತರಬೇತಿ ನೀಡಿ ನಂತರ ಅವರನ್ನು ಕರ್ತವ್ಯಕ್ಕೆ ಕಳುಹಿಸಲಾಗುತ್ತದೆ. ಕರ್ನಾಟಕ ಪೊಲೀಸ್ ಅಕಾಡೆಮಿಗೆ ತರಬೇತಿಗೆಂದು ಬಂದರೆ ಅವಧಿ ಮುಗಿಯುವವರೆಗೆ ಓರ್ವ ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡಿ ಕಳುಹಿಸಲಾಗುತ್ತದೆ. ಅವರಲ್ಲಿ ಅನುಭವ ದುಪ್ಪಟ್ಟಾಗಿರುತ್ತದೆ. ಆದರೆ, ಇದಕ್ಕೆ ಶ್ರದ್ಧೆ, ಆಸಕ್ತಿ ಬಹಳ ಮುಖ್ಯ ಎಂದರು.

Leave a Reply

comments

Related Articles

error: