ಕರ್ನಾಟಕಪ್ರಮುಖ ಸುದ್ದಿ

ತುಮಕೂರು ಜಿಲ್ಲೆಯ ಕೆರೆಗಳಿಗೆ ಹೇಮಾವತಿ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ರಾಜ್ಯ(ತುಮಕೂರು)ಆ.1:-ಜಿಲ್ಲೆಯ ಕೆರೆಗಳಿಗೆ ಹೇಮಾವತಿ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು  ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಗ್ರಾಮಾಂತರ ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷದಿಂದಲೂ ಜಿಲ್ಲೆಗೆ ಸಮರ್ಪಕವಾಗಿ ನೀರು ಕೊಟ್ಟಿಲ್ಲ. ಅನಗತ್ಯವಾಗಿ ಹೇಮಾವತಿ ನಾಲೆ ಒಡೆಸಿ ನಮ್ಮ ಪಾಲಿನ ನೀರು ಕದಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಬಾರಿ ಹಾಗಾಗಲು ಬಿಡುವುದಿಲ್ಲ. ಮೊದಲು ತುಮಕೂರು ಜಿಲ್ಲೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಗೆ 4 ತಿಂಗಳಿಂದ ನೀರು ಬಿಟ್ಟಿಲ್ಲ. ನಮ್ಮ ಪಾಲಿನ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದಾರೆ. ತಮಿಳುನಾಡಿನ ನಾಯಕಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿದ್ದಾರೆ. ಗುಜರಾತ್ ಕಾಂಗ್ರೆಸ್ ಶಾಸಕರನ್ನು ಇಲ್ಲಿಗೆ ಕರೆತಂದು ಪ್ರವಾಸ ಮಾಡಿಸುತ್ತಿದ್ದಾರೆ. ರಾಜ್ಯದಲ್ಲಿ ಬರ ಸ್ಥಿತಿ ಇರುವ ಸಂದರ್ಭದಲ್ಲಿ ಇಂತಹ ಆತಿಥ್ಯದ ಅವಶ್ಯಕತೆ ಇರಲಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಮಾಜಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ನೀರಾವರಿ ಬಗ್ಗೆ ನಯಾಪೈಸೆಯಷ್ಟು ಮಾಹಿತಿ ಇಲ್ಲ. ನೀರಾವರಿಗೆಂದು ಇಟ್ಟಿರುವ 46 ಸಾವಿರ ಕೋಟಿ ರೂ. ಕಾಂಗ್ರೆಸ್ ಪುಡಾರಿಗಳು, ಅಧಿಕಾರಿಗಳ ಪಾಲಾಗಿದೆ. ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಲಾಬಿ ನಡೆದು ಸಾವಿರಾರು ಕೋಟಿ ರೂ. ಲೂಟಿ ಮಾಡಿ ಕಾಂಗ್ರೆಸ್‌ನವರು ಸೋನಿಯಾಗಾಂಧಿಗೆ ಕೊಟ್ಟಿದ್ದಾರೆ. ಕಳೆದ ವರ್ಷ ಜಿಲ್ಲೆಗೆ ಹೇಮಾವತಿ ನೀರು ಬಿಡದೆ ಮೋಸ ಮಾಡಿದರು. ಸಿದ್ಧರಾಮಯ್ಯ ಅಧಿಕಾರದಲ್ಲಿ ಇರುವವರೆಗೂ ಜಿಲ್ಲೆಗೆ ಬರಬೇಕಾದ ನೀರು ಬರುವುದಿಲ್ಲ. ತುಮಕೂರು ನಗರ, ಜಿಲ್ಲೆಯನ್ನು ನೀರಿಲ್ಲದಂತೆ ನೋಡಿಕೊಂಡು ಹಾಳು ಮಾಡಿದೆ. ಮೂರ್ನಾಲ್ಕು ದಿನಗಳೊಳಗಾಗಿ ಹೇಮಾವತಿಗೆ ನೀರು ಬಿಡದಿದ್ದರೆ ಹೆದ್ದಾರಿ ತಡೆದು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ. ಜ್ಯೋತಿಗಣೇಶ್, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ಮುಖಂಡರಾದ ಎಂ.ಬಿ. ನಂದೀಶ್, ಅಂದಾನಪ್ಪ, ಕಾಮರಾಜ್, ಸಿದ್ಧರಾಮಣ್ಣ ಸೇರಿದಂತೆ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.       (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: