ಕರ್ನಾಟಕಪ್ರಮುಖ ಸುದ್ದಿ

ದೇವೇಗೌಡರ ಪತ್ರಕ್ಕೆ ಸ್ಪಂದಿಸಿದ ಸಿಎಂ; ನಾಳೆ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ

ಬೆಂಗಳೂರು,ಆ.1-ಹೇಮಾವತಿ ಬಲ ಮೇಲ್ದಂಡೆ ನಾಲೆಯಲ್ಲಿ ನೀರು ಬಿಡುವಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ತಲುಪಿದ ಕೂಡಲೇ ದೇವೇಗೌಡರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಸಿದ್ದರಾಮಯ್ಯ ದೇವೇಗೌಡರ ಮನವಿಗೆ ಪೂರಕವಾಗಿ ಸ್ಪಂದಿಸಿ ನಾಳೆ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ಕರೆದಿದ್ದಾರೆ.

ದೇವೇಗೌಡರು ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದ ಒಕ್ಕಣೆ ಇಂತಿದೆ: ರಾಜ್ಯದ ದಕ್ಷಿಣ ಭಾಗಗಳಲ್ಲಿ ಕಳೆದ ಮೂರು ವರ್ಷಗಳಿಂದ ಅತ್ಯಂತ ಕಡಿಮೆ ಮಳೆಯಾಗಿರುವುದರಿಂದ ರಾಜ್ಯ ಬಹಳ ಕಷ್ಟಕರವಾದ ಬರ ಪರಿಸ್ಥಿತಿಯನ್ನು ಎದುರುಸುತ್ತಿದೆ. ಕಾವೇರಿ ಜಲನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರು ಸಂಗ್ರಹವಾಗದೇ ಮತ್ತಷ್ಟು ಕ್ಲಿಷ್ಟಕರ ಪರಿಸ್ಥಿತಿ ಉದ್ಭವಿಸಿರುವ ಸಂದರ್ಭದಲ್ಲಿ ಜನ ಜಾನುವಾರುಗಳಿಗೆ ಕನಿಷ್ಠ ಕುಡಿಯುವ ನೀರನ್ನಾದರೂ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ.

ಹೇಮಾವತಿ ಜಲಾಶಯದ ಅಣೆಕಟ್ಟೆಗೆ ಮೂರು ಪ್ರಮುಖ ನಾಲೆಗಳು ಇರುತ್ತವೆ. ಎಡ ಮತ್ತು ಬಲ ನಾಲೆಗಳಿಗೆ ಅಣೆಕಟ್ಟೆಯಲ್ಲಿರುವ ಡೇಡ್ ಸ್ಟೋರೆಜ್ ಮಟ್ಟದವರೆವಿಗೂ ನೀರನ್ನು ಉಪಯೋಗಿಸಬಹುದಾಗಿದೆ. ಆದರೆ ಹೇಮಾವತಿ ಬಲ ಮೇಲ್ದಂಡೆ ನಾಲೆಗೆ ಅಣೆಕಟ್ಟೆ ಹಿನ್ನೀರನ್ನು ಮಾತ್ರ ಬಿಡಲು ಅವಕಾಶವಿರುತ್ತದೆ. ಆ ಹಿನ್ನೀರಿನ ಮಟ್ಟ ಕಡಿಮೆಯಾದರೇ ಆ ನಾಲೆಯಲ್ಲಿ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಹೇಮಾವತಿ ಬಲ ಮೇಲ್ದಂಡೆ ನಾಲೆಯನ್ನು ಅಂದಿನ ಕಾಂಗ್ರೆಸ್ ಆಡಳಿತ ಸರ್ಕಾರವೇ ನಿರ್ಮಿಸಲು ನಿರ್ಣಯ ಮಾಡಿತ್ತು. ಅತ್ಯಂತ ಬರಗಾಲಕ್ಕೆ ಪದೇ ಪದೇ ತುತ್ತಾಗುತ್ತಿದ್ದ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ, ಹೊಳೆನರಸೀಪುರ, ತಾಲೂಕಿನ ಹಳ್ಳಿ ಮೈಸೂರು ಹೋಬಳಿ, ಕೆ.ಆರ್.ನಗರ ತಾಲೂಕು ಮತ್ತು ಕೆ.ಆರ್.ಪೇಟೆ ತಾಲೂಕಿನ ಕೆಲವು ಭಾಗಗಳ ಕೆರೆ ಕಟ್ಟೆಗಳಿಗಾದರೂ ನೀರು ತುಂಬಿಸುವ ಉದ್ದೇಶವನ್ನು ಹೊಂದಿ ಕಾಲುವೆಯನ್ನು ನಿರ್ಮಿಸಲಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದಲೂ ಆ ಭಾಗದಲ್ಲಿ ಮಳೆ ಸರಿಯಾಗಿ ಆಗಿಲ್ಲ. ಹೇಮಾವತಿ ಬಲ ಮೇಲ್ದಂಡೆ ನಾಲೆಯಲ್ಲಿಯೂ ನೀರು ಹರಿಸದೇ ಇರುವುದರಿಂದ ಆ ಭಾಗದ ಕೆರೆ-ಕಟ್ಟೆಗಳು ಬರಿದಾಗಿ, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತುಂಬ ತೊಂದರೆಯಾಗಿದೆ. ಆ ಭಾಗದ ಯಾವುದೇ ಕೆರೆಕಟ್ಟೆಗಳಲ್ಲಿ ಒಂದು ಹನಿಯೂ ಸಹ ನೀರು ಇರುವುದಿಲ್ಲ. ಕೊಳವೆ ಭಾವಿಗಳ ಅಂರ್ತಜಲ ಕೊರತೆಯಿಂದ ಸಂಪೂರ್ಣ ಬತ್ತಿ ಹೋಗಿರುತ್ತವೆ.

ಈ ಹಿನ್ನೆಲೆಯಲ್ಲಿ ಅತ್ಯಂತ ಸಂಕಷ್ಟದಲ್ಲಿರುವ ಪ್ರದೇಶದ ಜನ-ಜಾನುವಾರುಗಳ ಕುಡಿಯುವ ನೀರಿನ ಸಲುವಾಗಿ ಮೊದಲು ಹೇಮಾವತಿ ಬಲ ಮೇಲ್ದಂಡೆ ನಾಲೆಯಲ್ಲಿ ನೀರು ಹರಿಸಬೇಕೆಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅರ್ನಿದಿಷ್ಟಾವಧಿ ಧರಣಿಯನ್ನು ನಡೆಸಿದ್ದಾರೆ. ಧರಣಿ ಸ್ಥಳಕ್ಕೆ ನಾನು ಭೇಟಿ ಕೊಟ್ಟು ಮಾಹಿತಿ ಸಂಗ್ರಹಿಸಿದ್ದೇನೆ.

ಅತ್ಯಂತ ತೀವ್ರ ಬರಗಾಲಕ್ಕೆ ಒಳಗಾಗಿರುವ ಪ್ರದೇಶ ಹೇಮಾವತಿ ಬಲ ಮೇಲ್ದಂಡೆ ನಾಲಾ ವ್ಯಾಪ್ತಿಗೆ ಬರಲಿದ್ದು, ಸುಮಾರು 205 ಕೆರೆ ಕಟ್ಟೆಗಳು ಆ ನಾಲಾ ವ್ಯಾಪ್ತಿಯಲ್ಲಿರುತ್ತವೆ. ಅವುಗಳನ್ನು ತುಂಬಿಸಲು ಹೆಚ್ಚೆಂದರೂ ಒಂದು ಟಿ.ಎಂ.ಸಿ. ನೀರನ್ನು ಕಾಲುವೆಯಲ್ಲಿ ಬಿಟ್ಟರೆ ಸಾಕಾಗುತ್ತದೆ. ಅವರ ಬೇಡಿಕೆ ಅತ್ಯಂತ ನ್ಯಾಯ ಸಮ್ಮತವಾಗಿದೆಯೆಂದು ನಾನು ಭಾವಿಸಿದ್ದೇನೆ.

ಉಳಿದ ನಾಲೆಗಳ ಅಚ್ಚುಕಟ್ಟು ಪ್ರದೇಶಗಳ ಕರೆಗಳಿಗೂ ನೀರು ಸಂಗ್ರಹವನ್ನು ಗಮದಲ್ಲಿಟ್ಟುಕೊಂಡು ಮುಂದೆ ನೀರು ಒದಗಿಸಬೇಕಾಗುತ್ತದೆ. ಹೇಮಾವತಿ ಬಲ ಮೇಲ್ದಂಡೆ ನಾಲೆಯ ಸಾರ್ಮಥ್ಯವು 800 ಕ್ಯೂಸೆಕ್ಸ್ ಇರುತ್ತದೆ. ಅಣೆಕಟ್ಟೆಯ ಒಳ ಹರಿವು ಅದಕ್ಕಿಂತಲೂ ಹೆಚ್ಚಿಗೆ ಇರುವುದರಿಂದ ಅಣೆಕಟ್ಟೆಯ ನೀರಿನ ಮಟ್ಟವು ಕಡಿಮೆಯಾಗುವುದಿಲ್ಲ. ಹೇಮಾವತಿ ಅಣೆಕಟ್ಟೆಯ ಒಟ್ಟು ನೀರಿನ ಶೇಖರಣೆಯು ಇಂದಿನ ಸಂಜೆಗೆ ಸುಮಾರು 17 ಟಿಎಂಸಿ ಯಷ್ಟು ಇದೆ. ಆ ಪೈಕಿ ಉಪಯೋಗಿಸಿಕೊಳ್ಳಬಹುದಾದ ನೀರಿನ ಪ್ರಮಾಣ ಸುಮಾರು 12.5 ಟಿಎಂಸಿ ಉಳಿಯುತ್ತದೆ. ಆದ್ದರಿಂದ ಕೂಡಲೇ ನನ್ನ ಈ ಮನವಿಗೆ ಸ್ಪಂದಿಸಿ ಹೇಮಾವತಿ ಬಲ ಮೇಲ್ದಂಡೆ ನಾಲೆಯಲ್ಲಿ ನೀರು ಬಿಡಲು ಸೂಕ್ತ ನಿರ್ದೇಶನ ನೀಡಬೇಕೆಂದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

 

 

 

Leave a Reply

comments

Related Articles

error: