ಮೈಸೂರು

ದಸರಾ ಮುಗಿದು ವಾರದ ಬಳಿಕ ಅನುದಾನ ಬಿಡುಗಡೆ

ದಸರಾ ಮಹೋತ್ಸವದ ಸಂದರ್ಭದಲ್ಲಿ ಕೈಗೊಳ್ಳಲಾಗುವ ತುರ್ತು ಕಾಮಗಾರಿಗಳಿಗೆ ರಾಜ್ಯ ಸರಕಾರವು ದಸರಾ ಮುಗಿದು ಎರಡು ವಾರಗಳ ಬಳಿಕ ಅನುದಾನ ಬಿಡುಗಡೆ ಮಾಡಿದೆ.

ಪ್ರತಿ ವರ್ಷ ರಾಜ್ಯ ಸರಕಾರ ಅನುದಾನ ನೀಡುತ್ತಾ ಬಂದಿದೆ. ಪ್ರಸಕ್ತ ಸಾಲಿನಲ್ಲಿ 16 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೊದಲ ಹಂತದಲ್ಲಿ 5 ಕೋಟಿ ರೂ. ಅನುದಾನವನ್ನು ಸರಕಾರ ಬುಧವಾರ ಬಿಡುಗಡೆ ಮಾಡಿದೆ ಎಂದು ಮೇಯರ್ ಬಿ.ಎಲ್. ಭೈರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರ್‍.ಟಿ.ಒ. ವೃತ್ತ, ನಂಜನಗೂಡು ಮುಖ್ಯರಸ್ತೆಯ ಕೆಲ ಭಾಗ, ಕುವೆಂಪುನಗರ ಸೇರಿ ನಗರದ ಹಲವು ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಎರಡನೇ ಹಂತದ ಬಿಡುಗಡೆಗಾಗಿ ಪತ್ರ ಬರೆಯಲಾಗಿದೆ ಎಂದರು.

ಮಾರುಕಟ್ಟೆ ಪಾರಂಪರಿಕ ಅಲ್ಲ: ದೇವರಾಜ ಮಾರುಕಟ್ಟೆ ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿದೆ. ಆದರೆ, ಅದು ಪಾರಂಪರಿಕ ಕಟ್ಟಡವಲ್ಲ ಎಂದು ಮೇಯರ್ ಹೇಳಿದ್ದಾರೆ. ಮಾರುಕಟ್ಟೆಯನ್ನು ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿಸಿಲ್ಲ. ಅರಸರ ಕಾಲದಲ್ಲಿ ನಿರ್ಮಾಣವಾಗಿರುವುದರಿಂದ ಪಾರಂಪರಿಕ ಎಂದು ಹೇಳಲಾಗುತ್ತಿದೆ. ಹಂತ ಹಂತವಾಗಿ ಕಾಮಗಾರಿ ನಡೆಸುವುದು ಅಸಾಧ್ಯ. 7 ದಿನಗಳೊಳಗೆ ಮಳಿಗೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ವ್ಯಾಪಾರಿಗಳು ತಾತ್ಕಾಲಿಕ ತಡೆಯಾಜ್ಞೆ ತಂದಿದ್ದು, ಅವರ ಮನವೊಲಿಸಲಾಗುವುದು ಎಂದರು.

ಸೂಯೇಜ್‍ ಫಾರಂನಲ್ಲಿ ಕಸ ನಿರ್ವಹಣೆಯ ಬಗ್ಗೆ ಮರು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಎರಡು ತಿಂಗಳ ಹಿಂದೆ ಕರೆದಿದ್ದ ಟೆಂಡರ್‍ನಲ್ಲಿ ಕಂಪನಿಗಳು ಕನಿಷ‍್ಠ 30 ವರ್ಷ ಗುತ್ತಿಗೆ ನೀಡುವಂತೆ ಕೇಳಿದ್ದವು. 400 ಟನ್‍ ಕಸ ನಿರ್ವಹಣೆಗೆ ಕನಿಷ್ಠ 30 ಕೋಟಿ ರು.ಗಳಷ್ಟು ಬಂಡವಾಳ ಹೂಡುವ ಅಗತ್ಯವಿದೆ. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದೆ. ಸಚಿವಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

Leave a Reply

comments

Related Articles

error: